ಮೈಸೂರು:ಕೋವಿಡ್ ಪಾಸಿಟಿವ್ ಬಂದ ತಕ್ಷಣ ಆಕ್ಸಿಜನೇಟೆಡ್ ಬೆಡ್ ಬೇಕು ಎಂಬ ನಿಲುವಿಗೆ ಸಾರ್ವಜನಿಕರು ಬರುತ್ತಾರೆ. ಎಲ್ಲರಿಗೂ ಆಕ್ಸಿಜನೇಟೆಡ್ ಹಾಸಿಗೆ ಅಗತ್ಯವಿಲ್ಲ ಎಂಬುದನ್ನು ಅಧಿಕಾರಿಗಳು ಮನವರಿಕೆ ಮಾಡಬೇಕು ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಹುಣಸೂರಿನ ನಗರಸಭೆ ಕಚೇರಿಯಲ್ಲಿ ಕೊವೀಡ್-19ಗೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳು ಮತ್ತು ಸ್ಥಿತಿಗತಿಗಳ ಕುರಿತು ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾರ್ವಜನಿಕರ ಭಯವನ್ನು ಕಡಿಮೆ ಮಾಡಲು ಕೋವಿಡ್‌ನಿಂದ ಎಷ್ಟು ಮಂದಿ ಪ್ರತಿದಿನ ಗುಣಮುಖರಾಗುತ್ತಿದ್ದಾರೆ ಎಂಬ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡುವುದರ ಜೊತೆಗೆ ಆಸ್ಪತ್ರೆಯಲ್ಲಿ ಸಿಗುವಂತಹ ಸೌಲಭ್ಯಗಳ ಬಗ್ಗೆ ತಿಳಿಸಿ ಜನರ ಭಯವನ್ನು ಕಡಿಮೆ ಮಾಡುವ ಕೆಲಸ ಮಾಡಬೇಕು ಎಂದು ಹೇಳಿದರು. ಬೆಂಗಳೂರು, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆ ಸೇರಿದಂತೆ ಅಕ್ಕಪಕ್ಕದ ಇತರ ಜಿಲ್ಲೆಗಳ ಕೋವಿಡ್ ಸೋಂಕಿತರು ತುರ್ತು ಪರಿಸ್ಥಿತಿಯಲ್ಲಿ ಮೈಸೂರಿನ ಆಸ್ಪತ್ರೆಗಳಿಗೆ ಬರುವ ಕಾರಣ ಮೈಸೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾವು ಉಂಟಾಗುತ್ತಿದೆ. ಹೀಗಾಗಿ ಸಾರ್ವಜನಿಕರಿಗೆ ಭಯ ಉಂಟಾಗುವುದು ಸಾಮಾನ್ಯವಾಗಿದ್ದು, ಭಯವನ್ನು ದೂರ ಮಾಡುವ ನಿಟ್ಟಿನಲ್ಲಿ ತಹಶೀಲ್ದಾರರು ಸೇರಿದಂತೆ ಇತರೆ ಅಧಿಕಾರಿಗಳು, ಶಾಸಕರು ಮಾಧ್ಯಮಗಳ ಮೂಲಕ ಜನರ ಭಯವನ್ನು ಕಡಿಮೆ ಮಾಡುವ ಕೆಲಸ ಮಾಡಬೇಕು ಎಂದರು.