ಮೈಸೂರು: ಕೇಂದ್ರ ಸರ್ಕಾರ ನೀಡುವ ಆದೇಶಗಳನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಈ ಬಾರಿಯ ದಸರಾ ಮಹೋತ್ಸವ ನಡೆಸಲು ಮುಂದಾಗಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.
ಮೈಸೂರಿನಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿಕೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಡಹಬ್ಬ ದಸರಾ ಮಹೋತ್ಸವವನ್ನು ಯಾವ ರೀತಿ ನಡೆಸಬೇಕೆಂದು ರಾಜ್ಯ ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯವರು ನೀಡುವ ವರದಿಯ ಆಧಾರದ ಮೇಲೆ ಮುಂದಿನ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು ಎಂದರು.
ದಸರಾ ಮಹೋತ್ಸವದ ಉದ್ಘಾಟನೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. 200 ಜನರಿಗೆ ಮಾತ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದ್ದಾರೆ. ಕಳೆದ ಬಾರಿಗಿಂತ ಈ ವರ್ಷ ದೀಪಾಲಂಕಾರ ಕಡಿಮೆ ಮಾಡಲಾಗಿದೆ. ಕಡ್ಡಾಯವಾಗಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ಜತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹೆಚ್ಚು ಒತ್ತು ನೀಡಲಾಗುವುದು ಎಂದು ಹೇಳಿದರು.
ಆರೋಗ್ಯ ಇಲಾಖೆ ತಾಂತ್ರಿಕ ತಂಡ ಮೈಸೂರಿಗೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಲಿದ್ದಾರೆ. ಅವರ ಮಾರ್ಗದರ್ಶನದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಇದರಲ್ಲಿ ಯಾವುದೇ ರೀತಿಯ ಪ್ರತಿಷ್ಠೆ ಇಲ್ಲ ಮತ್ತು ರಾಜಕೀಯ ಇಲ್ಲವೆಂದು ಸಚಿವರು ಸ್ಪಷ್ಟಪಡಿಸಿದರು.