ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಯೋಗ ದಸರಾ ಉಪಸಮಿತಿ ವತಿಯಿಂದ ಕರ್ನಾಟಕ ವಸ್ತು ಪ್ರದರ್ಶನ ಆವರಣದ ಪಿ. ಕಾಳಿಂಗರಾವ್ ಸಭಾಂಗಣದಲ್ಲಿ, ರಾಜ್ಯ ಮಟ್ಟದ ದಸರಾ ಯೋಗಾಸನ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಇದನ್ನು ದೀಪ ಬೆಳಗಿಸುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಟಿ ಸೋಮಶೇಖರ್ ಹಾಗೂ ಸಂಸದ ಪ್ರತಾಪ್ ಸಿಂಹ ಉದ್ಘಾಟಿಸಿದರು.
ಬಳಿಕ ಪ್ರತಾಪ್ ಸಿಂಹ ಮಾತನಾಡಿ, ನಾಡಹಬ್ಬ ದಸರಾದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಬಹಳ ಆಸಕ್ತಿ ಹೊಂದಿದ್ದಾರೆ. ವಿವಿಧ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಒತ್ತು ನೀಡುತ್ತಿದ್ದಾರೆ. ಎರಡು ವರ್ಷಗಳಿಂದ ಕೋವಿಡ್, ನೆರೆಯ ಕಾರಣದಿಂದ ಅದ್ಧೂರಿ ದಸರಾ ಆಚರಣೆ ಮಾಡಲಾಗಿರಲಿಲ್ಲ. ಈ ಬಾರಿ ಮುಖ್ಯಮಂತ್ರಿಗಳ ಒಪ್ಪಿಗೆ ಪಡೆದು ಜಿಲ್ಲಾ ಉಸ್ತುವಾರಿ ಸಚಿವರು ವಿಶೇಷವಾಗಿ ಆಯೋಜನೆ ಮಾಡಿದ್ದಾರೆ ಎಂದರು.
ಸೈಕಲ್ ಸವಾರಿಗೆ ಚಾಲನೆ ನೀಡಿದ ಸಚಿವ ಎಸ್ ಟಿ ಸೋಮಶೇಖರ್ ಮುಂದಿನ ದಿನಗಳಲ್ಲಿ ಯೋಗಕ್ಕೆ ಮೈಸೂರಿನಲ್ಲಿ ಮತ್ತಷ್ಟು ಒತ್ತು ನೀಡುವ ಮೂಲಕ ಯೋಗವನ್ನು ಗಟ್ಟಿಗೊಳಿಸುವ ಕಾರ್ಯವಾಗಬೇಕಿದೆ. ಆರೋಗ್ಯಯುತ ಜೀವನಕ್ಕೆ ಯೋಗವು ಸಹಕಾರಿಯಾಗಿದ್ದು, ಪೋಷಕರು ಮಕ್ಕಳಿಗೆ ಯೋಗ ಕಲಿಸಲು ಹೆಚ್ಚಿನ ಆಸಕ್ತಿ ತೋರುವಂತೆ ಸೂಚಿಸಿದರು.
ನಾಲ್ಕು ವಿಭಾಗದಲ್ಲಿ ಸ್ಪರ್ಧೆ:ವೇದಿಕೆ ಆರಂಭದಲ್ಲಿ ನಾಲ್ಕು ಯೋಗಾಪಟುಗಳು ಯೋಗಾಪ್ರದರ್ಶನ ಮಾಡಿದರು. 12 ವರ್ಷ ಮೇಲ್ಪಟ್ಟವರಿಂದ ಹಿಡಿದು 65 ವರ್ಷದವರೆಗಿನ ಬಾಲಕರು, ಬಾಲಕಿಯರು, ಪುರುಷರು, ಮಹಿಳೆಯರಿಗೆ ನಾಲ್ಕು ವಿಭಾಗದಲ್ಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಶೇಷಚೇತನರು ಸೇರಿದಂತೆ ಸುಮಾರು 1000 ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.
ದಸರಾ ಕ್ರೀಡಾಕೂಟಕ್ಕೆ ಚಾಲನೆ: ದಸರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ರಾಜ್ಯಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಸಚಿವ ಎಸ್ ಟಿ ಸೋಮಶೇಖರ್ ಚಾಲನೆ ನೀಡಿದರು.
ನಂತರ ಮಾತನಾಡಿದ ಸಚಿವರು, ತಾಯಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಕ್ರೀಡಾಜ್ಯೋತಿ ಬೆಳಗಿಸಲಾಯಿತು. ಒಲಂಪಿಕ್ ಪದಕ ವಿಜೇತ ಕುಸ್ತಿಪಟು ಸಾಕ್ಷಿ ಮಲ್ಲಿಕ್, ಕ್ರೀಡಾ ಸಚಿವರಾದ ನಾರಾಯಣಗೌಡ ಅವರು ಕ್ರೀಡಾಕೂಟ ಉದ್ಘಾಟಿಸಲಿದ್ದಾರೆ. ರಾಜ್ಯದ ನಾನಾ ಜಿಲ್ಲೆಗಳಿಂದ ಸುಮಾರು 4,500 ಕ್ರೀಡಾಪಟುಗಳು ಆಗಮಿಸಿದ್ದಾರೆ. ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಸೈಕಲ್ ಸವಾರಿಗೆ ಚಾಲನೆ: ಸಚಿವ ಎಸ್ ಟಿ ಸೋಮಶೇಖರ್ ಸೈಕಲ್ ಸವಾರಿಗೆ ಚಾಲನೆ ನೀಡಿದರು. ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಯುಕ್ತ ನಗರದ ಟೌನ್ ಹಾಲ್ ಎದುರು ಪುರಾತತ್ವ, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ವತಿಯಿಂದ ಆಯೋಜಿಸಿದ್ದ "ಪಾರಂಪರಿಕ ಸೈಕಲ್ ಸವಾರಿ (ಟ್ರಿಣ್-ಟ್ರಿಣ್) ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸಿದರು.
ಇದನ್ನೂ ಓದಿ:ಯುವ ದಸರಾ ಸಮಾರಂಭದಲ್ಲಿ ಅಪ್ಪುಗೆ ನಮನ.. ಪತಿ ನೆನೆದು ಭಾವುಕರಾದ ಅಶ್ವಿನಿ ಪುನೀತ್ ರಾಜ್ಕುಮಾರ್
ಬಳಿಕ ಮಾತನಾಡಿದ ಅವರು, ನಾಡಹಬ್ಬ ದಸರಾ ಅಂಗವಾಗಿ ಪುರಾತತ್ವ, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯವರು ಮೈಸೂರಿನಲ್ಲಿರುವ ಪಾರಂಪರಿಕ ಕಟ್ಟಡಗಳ ವೀಕ್ಷಣೆಗಾಗಿ ಸೈಕಲ್ ಸವಾರಿಯನ್ನು ಏರ್ಪಡಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಯುವಕರು, ಹಿರಿಯರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ. ಸೈಕಲ್ ಸವಾರಿಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಸೈಕಲ್ ಸವಾರಿಯಲ್ಲಿ 60 ವರ್ಷದ ಒಳಗಿನ ಸಾರ್ವಜನಿಕರು ಹಾಗೂ15 ವರ್ಷ ಮೇಲ್ಪಟ್ಟ ಶಾಲಾ-ಕಾಲೇಜು ವಿದ್ಯಾರ್ಥಿಗಳು ಮೈಸೂರು, ಮಂಡ್ಯ, ಕೊಡಗು, ಬೆಂಗಳೂರು ಸೇರಿದಂತೆ ಇತರೆ ಜಿಲ್ಲೆಗಳಿಂದ ಸುಮಾರು ನೂರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಶಾಸಕ ಎಲ್ ನಾಗೇಂದ್ರ ಸೇರಿದಂತೆ ಪುರಾತತ್ವ, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.