ಮೈಸೂರು : ರಾಜ್ಯದ ಬಗ್ಗೆ ರಾಹುಲ್ ಗಾಂಧಿಗೆ ಸಂಪೂರ್ಣ ಮಾಹಿತಿ ಇಲ್ಲ, ಎಡ ಬಲದಲ್ಲಿರುವವರು ಹೇಳಿದ್ದನ್ನು ರಾಹುಲ್ ಹೇಳುತ್ತಿದ್ದಾರೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಟೀಕಿಸಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬೇಲ್ ಮೇಲೆ ಹೊರಗಿರುವ ರಾಹುಲ್ ಗಾಂಧಿ ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುವ ಮೂಲಕ ಅಪಹಾಸ್ಯಕ್ಕೆ ಒಳಗಾಗುತ್ತಾರೆ. ಕಾಂಗ್ರೆಸ್ನವರ ಎಲ್ಲಾ ಆಟ ಜನರಿಗೆ ಅರ್ಥವಾಗುತ್ತದೆ ಎಂದರು.
ರಾಹುಲ್ ಆರೋಪದಿಂದ ಬಿಜೆಪಿಗೆ ಮುಜುಗರ ಇಲ್ಲ: ಭ್ರಷ್ಟಾಚಾರ ಕುರಿತಾಗಿ ರಾಹುಲ್ ಆರೋಪದಿಂದ ಬಿಜೆಪಿಗೆ ಯಾವುದೇ ಮುಜುಗರ ಆಗಿಲ್ಲ. ಯಾತ್ರೆಯಿಂದ ಬಿಜೆಪಿಗೆ ಯಾವುದೇ ಭಯವಿಲ್ಲ. ಕಾಂಗ್ರೆಸ್ ಇನ್ನೂ ದೇಶದಲ್ಲಿ ಅಸ್ತಿತ್ವದಲ್ಲಿದೆ. ರಾಜ್ಯ ಕಾಂಗ್ರೆಸ್ ನಲ್ಲಿ 15 ಗುಂಪುಗಳಿವೆ. ಈ ಗುಂಪನ್ನು ಒಂದು ಮಾಡಲು ಈ ಯಾತ್ರೆ ಮಾಡಿದ್ದರೆ ಒಳ್ಳೆಯದಿತ್ತು. ಆದರೆ ರಾಹುಲ್ ಗಾಂಧಿ ಪಾದಯಾತ್ರೆ ಮಾಡಿದ ಕಡೆಯೆಲ್ಲಾ ಕಾಂಗ್ರೆಸ್ ಸೋತಿದೆ ಎಂದು ವ್ಯಂಗ್ಯವಾಡಿದರು.
ಬ್ಯಾನರ್ ಕೀಳುವ ಕೀಳುಮಟ್ಟದ ರಾಜಕಾರಣ ಮಾಡಿಲ್ಲ : ಬಿಜೆಪಿ ಬ್ಯಾನರ್ ಕೀಳುವ ಕೀಳು ಮಟ್ಟದ ರಾಜಕಾರಣ ಮಾಡಿಲ್ಲ, ಮಾಡುವುದೂ ಇಲ್ಲ. ಕಾಂಗ್ರೆಸ್ ನವರೇ ಬ್ಯಾನರ್ ಕಿತ್ತು ಪ್ರಚಾರಕ್ಕಾಗಿ ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ. ಇದೇ ಥರ ಸುಳ್ಳು ಆರೋಪವನ್ನು ಕಾಂಗ್ರೆಸ್ ಮುಂದುವರಿಸಿದರೆ ನಮಗೂ ಬ್ಯಾನರ್ ಹಾಕುವ, ಪಾದಯಾತ್ರೆ ಮಾಡುವ ಶಕ್ತಿ ಇದೆ ಎಂದು ಸಚಿವ ಸೋಮಶೇಖರ್ ಗುಡುಗಿದರು.
ನಮ್ಮ ಸಿಎಂ ಪೇ ಸಿಎಂ ಅಲ್ಲ ಪೇಯಿಂಗ್ ಸಿಎಂ : ಯುಪಿಎ ಸರ್ಕಾರದ ಭ್ರಷ್ಟಾಚಾರದ ಪಟ್ಟಿ ಹೇಳಬೇಕಾ? ಗುತ್ತಿಗೆದಾರ ಕೆಂಪಣ್ಣ ದಾಖಲೆ ನೀಡುವ ಬದಲು ಬರೀ ಪ್ರಚಾರದಲ್ಲಿ ತೊಡಗಿದ್ದಾರೆ. ನಮ್ಮ ಸಿಎಂ ಪೇ ಸಿಎಂ ಅಲ್ಲ, ಪೇಯಿಂಗ್ ಸಿಎಂ. ಕಾಮನ್ ಮ್ಯಾನ್ ಸಿಎಂ ಆಗಿ ನಾಡಿನ ಅಭಿವೃದ್ಧಿಗೆ ಹಣ ನೀಡುತ್ತಿದ್ದಾರೆ. ದಾಖಲೆಯೇ ನೀಡದೆ ಗುತ್ತಿಗೆದಾರರ ಸಂಘದ ಕೆಂಪಣ್ಣ ವೃಥಾ ಆರೋಪ ಮಾಡುತ್ತಿದ್ದಾರೆ. ಅದೇ ಹೇಳಿಕೆ ಇಟ್ಟುಕೊಂಡು ರಾಹುಲ್ ಗಾಂಧಿ ಸರ್ಕಾರದ ಮೇಲೆ ಟೀಕೆ ಮಾಡಿರುವುದು ಸರಿಯಲ್ಲ. ನಮ್ಮ ಸರ್ಕಾರದಲ್ಲಿ ಆರೋಪ ಬಂದ ತಕ್ಷಣ ಅದನ್ನು ತನಿಖೆ ಮಾಡಿಸಿ ಶಿಕ್ಷೆ ಕೊಡಿಸುತ್ತಿದ್ದೇವೆ ಎಂದರು.
ಇದನ್ನೂ ಓದಿ :ದೇಶ ವಿಭಜಿಸುವ ಶಕ್ತಿಗಳಿಗೆ ರಾಹುಲ್ ಗಾಂಧಿ ಪ್ರೋತ್ಸಾಹ: ಸಂಸದ ತೇಜಸ್ವಿ ಸೂರ್ಯ