ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಸೆ.26 ರಂದು ನಡೆಯಲಿರುವ 412ನೇ ಮೈಸೂರು ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಸೇರಿದಂತೆ 13 ಜನರಿಗೆ ವೇದಿಕೆಯಲ್ಲಿ ಅವಕಾಶ ಇರುತ್ತದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಮಾಧ್ಯಮಗಳಿಗೆ ವಿವರ ನೀಡಿದರು.
ಇಂದು ಅರಮನೆಗೆ ಭೇಟಿ ನೀಡಿ, ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರಿಗೆ ನಾಡಹಬ್ಬ ದಸರಾಗೆ ಆಹ್ವಾನ ನೀಡಿ ಮಾಧ್ಯಮಗಳ ಜೊತೆ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಮಾತನಾಡಿದರು. ಪ್ರತಿ ವರ್ಷದಂತೆ ಈ ವರ್ಷವೂ ದಸರಾಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ರಾಜಮಾತೆ ಪ್ರಮೋದಾದೇವಿ ಒಡೆಯರ್ ಭರವಸೆ ನೀಡಿದ್ದಾರೆ.
ಪ್ರತಿ ವರ್ಷದಂತೆ ರಾಜಮನೆತನಕ್ಕೆ ನೀಡುವ ಗೌರವ ಧನವನ್ನು ಈ ವರ್ಷವೂ ಸಹಾ ನೀಡಲಾಗುವುದು. ಈ ಬಾರಿ ನಾಡಹಬ್ಬ ದಸರಾ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮಿಸುತ್ತಿದ್ದು, ವೇದಿಕೆಯಲ್ಲಿ ರಾಷ್ಟ್ರಪತಿಗಳು, ರಾಜ್ಯಪಾಲರು, ಮುಖ್ಯಮಂತ್ರಿ, 6 ಜನ ಕೇಂದ್ರ ಸಚಿವರು, 4 ಜನ ರಾಜ್ಯ ಸಚಿವರು ಸೇರಿ ಒಟ್ಟು 13 ಜನ ಗಣ್ಯರು ದಸರಾ ಉದ್ಘಾಟನಾ ವೇದಿಕೆಯಲ್ಲಿ ಇರಲಿದ್ದಾರೆ ಎಂದು ಮಾಹಿತಿ ನೀಡಿದರು.
(ಓದಿ: ಮೈಸೂರು ದಸರಾ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಆಹ್ವಾನ)