ಮೈಸೂರು: ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ಹೋರಾಟ ನಡೆಸುತ್ತಿರುವವರು ರೈತರಲ್ಲ. ಈ ಹೋರಾಟ ರೈತರ ಹೋರಾಟವಾಗಿ ಉಳಿದಿಲ್ಲ. ಅದು ದಲ್ಲಾಳಿಗಳ ಹೋರಾಟವಾಗಿದೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ಮಾತನಾಡಿd ಅವರು, ರೈತರನ್ನು ಮನವೊಲಿಸಬಹುದು, ಆದರೆ ರೈತರಂತೆ ನಟಿಸುವವರನ್ನು ಮನವೊಲಿಸಲು ಸಾಧ್ಯವಿಲ್ಲ. ನೂತನ ಕಾಯ್ದೆಯಿಂದ ರೈತರಿಗೆ ಒಳ್ಳೆಯದಾಗಲಿದೆ. ರೈತರು ಎಪಿಎಂಸಿ ಹೊರತಾಗಿ ತಮ್ಮ ಹೊಲದಲ್ಲಿ ತಮ್ಮ ಬೆಳೆಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದು ಎಂದರು.
ಕೃಷಿ ಕಾಯ್ದೆ ವಿರೋಧಿಸುವವರು ರೈತರಲ್ಲ ದಲ್ಲಾಳಿಗಳು: ಸಚಿವೆ ಶೋಭಾ ಕರಂದ್ಲಾಜೆ ಕೊರೊನಾ ಸಂದರ್ಭ ದೇಶದಲ್ಲಿ ದಾಖಲೆಯ ಪ್ರಮಾಣದಲ್ಲಿ ಕೃಷಿ ಉತ್ಪನ್ನಗಳು ಶೇಖರಣೆಯಾಗಿವೆ. ನಗರದಿಂದ ಕೋವಿಡ್ ಸಂದರ್ಭದಲ್ಲಿ ಹಳ್ಳಿಗೆ ಬಂದ ಯುವಕರು ಕೃಷಿ ಮಾಡಿದ್ದರಿಂದ ಇದು ಸಾಧ್ಯವಾಯಿತು ಎಂದು ಸಚಿವರು ಅಭಿಪ್ರಾಯಪಟ್ಟರು.
ಉಗ್ರರ ವಿರುದ್ಧ ಒಟ್ಟಾಗಿ ದನಿ ಎತ್ತಬೇಕು
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ಖಂಡನೀಯ. ಈ ವಿಚಾರದಲ್ಲಿ ಎಲ್ಲಾ ದೇಶಗಳು ಒಟ್ಟಾಗಿ ದನಿ ಎತ್ತಿ ವಿಶ್ವಸಂಸ್ಥೆ ಮೇಲೆ ಒತ್ತಡ ಹೇರಬೇಕಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಪ್ರಜಾಪ್ರಭುತ್ವ ರಾಷ್ಟ್ರಗಳ ಮೇಲೆ ಇಂತಹ ದಾಳಿ ನಡೆಯುತ್ತಿರುವುದು ಆತಂಕ ತಂದಿದೆ. ಅಫ್ಘಾನಿಸ್ತಾನದ ಪಕ್ಕದಲ್ಲೇ ಪಾಕಿಸ್ತಾನ ಇದೆ. ಈ ವಿಚಾರದಲ್ಲಿ ಎಲ್ಲಾ ದೇಶಗಳು ಒಟ್ಟಾಗಿ ದನಿ ಎತ್ತಬೇಕು. ವಿಶ್ವಸಂಸ್ಥೆ ಮೇಲೆ ಒತ್ತಡ ಹೇರಿ ಸಮಸ್ಯೆ ಬಗೆಹರಿಸಬೇಕಿದೆ ಎಂದು ಒತ್ತಾಯಿಸಿದರು.
ರೈತನ ಮಗಳಿಗೆ ಮೋದಿ ಕೃಷಿ ಖಾತೆ ನೀಡಿದ್ದಾರೆ
ಪ್ರಧಾನಿ ನರೇಂದ್ರ ಮೋದಿ ಅವರು ರೈತನ ಮಗಳೊಬ್ಬಳನ್ನು ಗುರುತಿಸಿ ಕೃಷಿ ಖಾತೆ ನೀಡಿದ್ದಾರೆ. ನಾನು ಹಳ್ಳಿಯಲ್ಲಿ ಓದುವಾಗ ಕರೆಂಟ್ ಇರಲಿಲ್ಲ. ರಸ್ತೆಯು ಕೂಡ ಇರಲಿಲ್ಲ. ಅಂತಹ ಹಳ್ಳಿಯಿಂದ ಬಂದವಳಿಗೆ ಕೃಷಿ ಖಾತೆ ಕೊಟ್ಟು ಕೆಲಸ ಮಾಡಲು ಅನುವು ಮಾಡಿಕೊಟ್ಟಿದ್ದಾರೆ. ದೇಶದಲ್ಲಿ ಶೇ.80ರಷ್ಟು ರೈತರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇಂತವರು ಬೇರೆ ಕೆಲಸಕ್ಕೆ ಹೋಗದಂತೆ, ಕೃಷಿಯಲ್ಲೇ ಉಳಿಯುವಂತೆ ಮಾಡುವ ಯೋಜನೆಯನ್ನು ರೂಪಿಸಲಾಗುವುದು ಎಂದು ತಿಳಿಸಿದರು.
ಓದಿ:ಬೆಳಗಾವಿಯಲ್ಲೂ ಬಿಜೆಪಿ ಧ್ವಜ ಹಾರಿಸುತ್ತೇವೆ: ನಳಿನ್ ಕುಮಾರ್ ಕಟೀಲ್