ಮೈಸೂರು:ಬಿಜೆಪಿಯವರಿಗೆ ಯಾರು ಒಳ್ಳೆಯದು ಮಾಡಿದ್ದಾರೆ ಅವರಿಗೆ ಒಳ್ಳೆಯದು ಮಾಡುವ ಗುಣಗಳಲಿಲ್ಲ. ಇವರು ಸಾಧ್ಯವಾದಷ್ಟು ಉಪಯೋಗ ಮಾಡಿಕೊಂಡು ನಂತರ ನಡುದಾರಿಯಲ್ಲಿ ಬಿಟ್ಟು ಹೋಗುತ್ತಾರೆ. ಹಿಂದೆ ನಮ್ಮನ್ನು ಬಿಟ್ಟುಹೋದ ಉದಾಹರಣೆಗಳಿವೆ, ಯಾವ ಕಾಂಗ್ರೆಸ್ ಶಾಸಕರು ಅವರೊಂದಿಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ನಗರದ ಕಿರು ರಂಗಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಎರಡು ಬಾರಿ ಸರ್ಕಾರ ರಚಿಸಿದರು ಬಹುಮತವೇ ಇರಲಿಲ್ಲ. ಆಗ ಪಕ್ಷೇತರ ಅಭ್ಯರ್ಥಿಯಾಗಿ ನಾನು ಸೇರಿ ಐದು ಮಂದಿ ಶಾಸಕರು ಬೆಂಬಲ ನೀಡಿದ್ದೆವು. ನಂತರ ನಮ್ಮನ್ನು ಬೀದಿಗೆ ಬಿಟ್ಟುಹೋದರು ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು. ಕಾಂಗ್ರೆಸ್ನ 40 ಶಾಸಕರು ಬಿಜೆಪಿ ಜೊತೆ ಸಂಪರ್ಕದಲ್ಲಿದ್ದಾರೆ ಎಂಬ ಬಿ.ಎಲ್. ಸಂತೋಷ್ ಹೇಳಿಕೆಗೆ ಬಗ್ಗೆ ಮಾತನಾಡಿ, 40 ಮಂದಿ ಶಾಸಕರಲ್ಲ, ನಾಲ್ಕು ಜನ ಶಾಸಕರನ್ನು ಕರೆದುಕೊಂಡು ಹೋಗಲಿ ನೋಡೋಣ ಎಂದು ಸವಾಲು ಹಾಕಿದರು. ಮಾಜಿ ಸಚಿವ ಈಶ್ವರಪ್ಪ ಹೇಳಿಕೆ ಬಗ್ಗೆ ಮಾತನಾಡಿ, ಅವರು ಮೊದಲು ಕೇಂದ್ರ ನಾಯಕರನ್ನು ಭೇಟಿ ಮಾಡಿ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲಿ ನಂತರ ಸನಾತನ ಧರ್ಮದ ಬಗ್ಗೆ ಮಾತನಾಡಲಿ ಎಂದರು.
ಸಮನ್ವಯ ಕೊರತೆ ಇಲ್ಲ:ಸಚಿವರು ಹಾಗೂ ಶಾಸಕರ ನಡುವೆ ಸಮನ್ವಯದ ಕೊರತೆ ಇಲ್ಲ. ಎಲ್ಲರೂ ಅನ್ಯೋನ್ಯವಾಗಿ, ಒಟ್ಟಾಗಿ ಪ್ರೀತಿ ವಿಶ್ವಾಸದಿಂದ ಇದ್ದೇವೆ. ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಸ್ವಲ್ಪ ಗೊಂದಲವಾಗಿದೆಯಷ್ಟೆ. ಈ ಬಗ್ಗೆ ಶಾಸಕ ಬಸವರಾಜ ರಾಯರೆಡ್ಡಿ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವುದು ನಿಜ. ಈ ಪತ್ರ ಬರೆದ ಮಾತ್ರಕ್ಕೆ ಸಮನ್ವಯದ ಕೊರತೆ ಇದೆ ಎಂದು ಹೇಳುವುದು ಸರಿಯಲ್ಲ ಎಂದು ಸಚಿವ ಶಿವರಾಜ್ ತಂಗಡಗಿ ಸ್ಪಷ್ಟನೆ ನೀಡಿದರು.