ಮೈಸೂರು :ಕೇಂದ್ರ ಸರ್ಕಾರದ ಕೌಶಲ್ಯ ತರಬೇತಿ ಮುಖಾಂತರ ತರಬೇತಿ ನೀಡಿ ಯುವಕರಿಗೆ ಉದ್ಯೋಗ ಕಲ್ಪಿಸಲಾಗುವುದು ಎಂದು ರಾಜ್ಯ ಕಾರ್ಮಿಕ ಇಲಾಖೆ ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದ್ದಾರೆ.
ನಗರದ ವಸ್ತು ಪ್ರದರ್ಶನ ಆವರಣದಲ್ಲಿ ಏರ್ಪಡಿಸಿದ್ದ ಉದ್ಯೋಗ ಮೇಳಕ್ಕೆ ಚಾಲನೆ ನೀಡುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೋವಿಡ್ -19ರ ಲಾಕ್ಡೌನ್ ಸಡಿಲಗೊಂಡ ನಂತರ ಶೇ.90ರಷ್ಟು ಕಾರ್ಖಾನೆಗಳು ಆರಂಭಗೊಂಡಿವೆ.
ಈಗಾಗಲೇ ಶೇ.70 ರಷ್ಟು ಕಾರ್ಮಿಕರು ಮರಳಿ ಕಾರ್ಯ ನಿರ್ವಹಿಸಲು ಆರಂಭಿಸಿದ್ದಾರೆ. ಎಂದಿನಂತೆ ಕಾರ್ಖಾನೆಗಳು ಆರಂಭಗೊಂಡು ಎಲ್ಲ ಕಾರ್ಮಿಕರಿಗೂ ಕೆಲಸ ಸಿಗುತ್ತಿದೆ ಎಂದರು.
ಉದ್ಯೋಗ ಮೇಳಕ್ಕೆ ಚಾಲನೆ ನೀಡಿದ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಪದವೀಧರ ಯುವಕ-ಯುವತಿಯರು ಸ್ವಯಂ ಉದ್ಯೋಗದ ಕಡೆ ಹೆಚ್ಚಿನ ಆಸಕ್ತಿ ತೋರಬೇಕಾಗಿದೆ. ಜೀವನದಲ್ಲಿ ಬರುವ ಕಷ್ಟಗಳನ್ನು ಆತ್ಮಸ್ಥೈರ್ಯದಿಂದ ಎದುರಿಸಿದರೆ ಮಾತ್ರ ಸಾಧನೆ ಮಾಡಲು ಸಾಧ್ಯ. ಎಲ್ಲದಕ್ಕೂ ಸರ್ಕಾರದ ಮೇಲೆ ಅವಲಂಬಿತವಾಗದೆ, ಸರ್ಕಾರದ ಕೌಶಲ್ಯ ತರಬೇತಿ ಸೇರಿ ವಿವಿಧ ಸೌವಲತ್ತುಗಳನ್ನು ಪಡೆದುಕೊಳ್ಳಿ. ನೀವೇ ಉದ್ಯೋಗಿಗಳಾಗಿ ಇತರರಿಗೆ ಉದ್ಯೋಗ ಕಲ್ಪಿಸುವಂತಾಗಬೇಕು ಎಂದರು.
ಓದಿ : ಎಸ್ ಎಲ್ ಭೈರಪ್ಪನವರ 'ಪರ್ವ' ರಂಗ ಪ್ರದರ್ಶನಕ್ಕೆ ₹50 ಲಕ್ಷ ಅನುದಾನ : ಸಚಿವ ಅರವಿಂದ ಲಿಂಬಾವಳಿ
ರಾಜ್ಯದ ಯಾವುದೇ ಜನಪ್ರತಿನಿಧಿಗಳು ಮಾಡುವ ಉದ್ಯೋಗ ಮೇಳಕ್ಕೆ ಸರ್ಕಾರದ ಬೆಂಬಲವಿದೆ. ಉದ್ಯೋಗ ಮಳೆಗೆಗಳಿಗೆ ಖಾಸಗಿ ಸಂಘ-ಸಂಸ್ಥೆಗಳು ಸಹ ಉದ್ಯೋಗ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಮುಂದಾಗಬೇಕು.
ಕೋವಿಡ್ ನಂತರ ಈಗ ಚೇತರಿಸಿಕೊಳ್ಳುತ್ತಿರುವ ಸರ್ಕಾರ ಮುಂದಿನ ದಿನಗಳಲ್ಲಿ ನಿರುದ್ಯೋಗ ಸಮಸ್ಯೆ ಕಡಿಮೆ ಮಾಡಲಿದೆ. ನಿರುದ್ಯೋಗಿಗಳು ಆತಂಕಪಡುವ ಪ್ರಮೇಯವಿಲ್ಲ. ಎಲ್ಲರಿಗೂ ಕೌಶಲ್ಯ ತರಬೇತಿ ಮುಖಾಂತರ ಅವರ ವಿದ್ಯಾರ್ಜನೆಗೆ ತಕ್ಕಂತೆ ಉದ್ಯೋಗ ಕಲ್ಪಿಸಲು ಸರ್ಕಾರ ಸಿದ್ಧವಿದೆ ಎಂದು ತಿಳಿಸಿದರು.