ಮೈಸೂರು:ಇಂದಿರಾ ಕ್ಯಾಂಟೀನ್ನಲ್ಲಿ ಊಟ ಕೊಡುತ್ತೇವೆ, ಆದರೆ ಮಾಂಸಹಾರ ಪೂರೈಕೆ ಇಲ್ಲ. ಆದರೆ ಹೊರಗಡೆಯಿಂದ ಮಾಂಸಹಾರ ತಂದು ತಿನ್ನಬಹುದು ಎಂದು ಮಾಧ್ಯಮ ಸಂವಾದದಲ್ಲಿ ಸಮಾಜ ಕಲ್ಯಾಣ ಸಚಿವ ಡಾ.ಎಚ್ ಸಿ.ಮಹಾದೇವಪ್ಪ ಹೇಳಿದ್ದಾರೆ.
ಇಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಸಚಿವ ಡಾ.ಎಚ್ ಸಿ.ಮಹಾದೇವಪ್ಪ, ’’ನಾನು 9 ಚುನಾವಣೆಯನ್ನು ಎದುರಿಸಿದ್ದೇನೆ. ಅದರಲ್ಲಿ ಆರು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇನೆ. ಮೂರು ಚುನಾವಣೆಯಲ್ಲಿ ಸೋತಿದ್ದೇನೆ. ಒಂದು ಬಾರಿ ಲೋಕಸಭಾ ಚುನಾವಣೆಗೂ ಸ್ಪರ್ಧೆ ಮಾಡಿ ಸೋತಿದ್ದೇನೆ. ಅಲ್ಲಿಂದ ಇಲ್ಲಿಯವರೆಗೆ ಯಾರ ಬಳಿಯೂ ಟಿಕೆಟ್ ಕೊಡಿ ಎಂದು ಕೇಳಿಲ್ಲ. ಟಿಕೆಟ್ ಕೊಟ್ಟಾಗ ಗೆದ್ದು, ಅಧಿಕಾರ ಸಿಕ್ಕಾಗ ಜವಾಬ್ದಾರಿಯುತವಾಗಿ ಕೆಲಸ ಮಾಡಿದ್ದೇನೆ‘‘ ಎಂದರು.
ಇಂದಿರಾ ಕ್ಯಾಂಟೀನ್ ಆರಂಭಿಸುವ ಪ್ರಸ್ತಾಪ ಇದೆ:ಹಳೆಯ ಇಂದಿರಾ ಕ್ಯಾಂಟೀನ್ ಜೊತೆಗೆ ಹೊಸ ಇಂದಿರಾ ಕ್ಯಾಂಟಿನ್ ಶುರು ಮಾಡುವ ಪ್ರಸ್ತಾವ ಇದೆ. ಸದ್ಯ ಇಂದಿರಾ ಕ್ಯಾಂಟೀನ್ನಲ್ಲಿ ಊಟ ಕೊಡಬೇಕು ಎಂದು ಪ್ರಸ್ತಾಪ ಮಾಡಲಾಗುತ್ತಿದ್ದು. ಮಾಂಸಹಾರ ನೀಡುವ ಬಗ್ಗೆ ಸದ್ಯಕ್ಕೆ ಚಿಂತನೆ ಇಲ್ಲ. ಆದರೆ ಮಾಂಸಾಹಾರಿಗಳು ಹೊರಗಡೆಯಿಂದ ತಂದು ಇಂದಿರಾ ಕ್ಯಾಂಟೀನ್ನಲ್ಲಿ ಮಾಂಸಾಹಾರ ತಿನ್ನಬಹುದು ಎಂದು ಸಚಿವರು ಹೇಳಿಕೆ ನೀಡಿದ್ದಾರೆ.
ಬೇರೆ ಕಡೆಯಿಂದ ಅಕ್ಕಿ ಖರೀದಿಸುವ ಚಿಂತನೆ:ಚುನಾವಣಾ ಸಂದರ್ಭದಲ್ಲಿ ಜನರಿಗೆ ಐದು ಗ್ಯಾರಂಟಿಗಳನ್ನು ನೀಡಿದ್ದೆವು. ಅದರಂತೆ ಐದು ಗ್ಯಾರಂಟಿಗಳಾದ ಉಚಿತ ವಿದ್ಯುತ್, ಉಚಿತ ಬಸ್ ಸೌಲಭ್ಯ, ಅನ್ನ ಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ನೀಡಲು ತೀರ್ಮಾನಿಸಿದ್ದೆವು. ಆದರೆ, ಕೇಂದ್ರ ಸರ್ಕಾರ ಅಕ್ಕಿ ನೀಡಲು ಹಿಂದೇಟು ಹಾಕುತ್ತಿದ್ದು. ಮುಖ್ಯಮಂತ್ರಿಗಳು ಕೇಂದ್ರದ ಜೊತೆ ಮಾತನಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಅಕ್ಕಿ ನೀಡದಿದ್ದರೆ ಪರ್ಯಾಯ ಮಾರ್ಗದ ಮೂಲಕ ಅಕ್ಕಿಯನ್ನು ಖರೀದಿಸುವ ಚಿಂತನೆ ಮಾಡುತ್ತಿದ್ದೇವೆ ಎಂದು ಸಚಿವರು ಹೇಳಿದರು.