ಮೈಸೂರು: ಸಿದ್ದರಾಮಯ್ಯ ಹುಲಿಯಾಗುತ್ತಾರೆ ಅಂದುಕೊಂಡಿದ್ದೆವು, ಆದರೆ ಹಸಿವಿನಿಂದ ಒದ್ದಾಡುತ್ತಿರುವ ಇಲಿಯಾಗಿದ್ದಾರೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಕುಟುಂಬ ಸಮೇತರಾಗಿ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ನೂತನ ಸಚಿವ ಸಂಪುಟ ಬಿಜೆಪಿ ಬೆಟ್ಟ ಅಗೆದು ಇಲಿ ಹಿಡಿದಂತೆ ಆಗಿದೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು.
ಚುನಾವಣೆಗೆ ಇನ್ನೂ 2 ವರ್ಷ ಇದೆ. ಅವರು ರಾಜ್ಯಕ್ಕೆ ಹುಲಿಯಾಗುವ ಬದಲು ಡಿ.ಕೆ.ಶಿವಕುಮಾರ್ ಮೇಲೆ ಹುಲಿಯಾಗಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ನಿಂತು ಹೇಳುತ್ತೇನೆ, ತಮ್ಮ ಸಿಎಂ ಸ್ಥಾನಕ್ಕೆ ಅಡ್ಡಿಯಾಗುತ್ತಾರೆ ಎಂದು ಕಳೆದ ಚುನಾವಣೆಯಲ್ಲಿ ಪರಮೇಶ್ವರ್ ಅವರನ್ನು ಸೋಲಿಸಿದ್ದು ಸಿದ್ದರಾಮಯ್ಯ. ಒಬ್ಬನೇ ಒಬ್ಬ ಕುರುಬ ನಾಯಕರನ್ನು ಬೆಳೆಯಲು ಸಿದ್ದರಾಮಯ್ಯ ಬಿಡಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಇದನ್ನೂಓದಿ: ರಾಜ್ಯಕ್ಕೆ ಯಾರೇ ಸಚಿವರಾದರೂ ಜನರಿಗೆ ಪ್ರಯೋಜನವಿಲ್ಲ: ರಾಮಲಿಂಗಾರೆಡ್ಡಿ
ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದ್ದು, ಎಲ್ಲಾ ಗೊಂದಲಗಳು ಬಗೆಹರಿಯಲಿವೆ. ನಾನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಆಗಬೇಕೆಂದು ಬೆಂಬಲಿಗರು ಬಯಸಿದ್ದರು. ಕೆಲವರು ನನ್ನನ್ನು ಸಚಿವ ಸ್ಥಾನದಿಂದ ಕೈಬಿಡಲಾಗುತ್ತಿದೆ ಎಂದು ಬಿಂಬಿಸಿದ್ದರು. ಆದರೆ, ಹೈಕಮಾಂಡ್ ನನ್ನನ್ನು ಹೇಗೆ ಪರಿಗಣಿಸಿತು ಎಂದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನುಭವವುಳ್ಳವರು, ಒಳ್ಳೆಯ ಆಡಳಿತ ನಡೆಸುತ್ತಾರೆ. ನಮ್ಮ ಆದ್ಯತೆ ಪ್ರವಾಹ ಪರಿಸ್ಥಿತಿ ಹಾಗೂ ಕೋವಿಡ್ ಅನ್ನು ಸಮರ್ಥವಾಗಿ ನಿಭಾಯಿಸುವುದಾಗಿದೆ. ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ಉಪಮುಖ್ಯಮಂತ್ರಿ ಸ್ಥಾನ ತೆಗೆದು ಹಾಕಿದ್ದು ಹೈಕಮಾಂಡ್ ನಿರ್ಧಾರ. ನನಗೆ ಯಾವ ಖಾತೆ ಕೊಟ್ಟರೂ ನಿರ್ವಹಿಸುತ್ತೇನೆ ಎಂದರು.
ಸುತ್ತೂರು ಶ್ರೀ ಆಶೀರ್ವಾದ ಪಡೆದ ಈಶ್ವರಪ್ಪ ಸುತ್ತೂರು ಶ್ರೀ ಆಶೀರ್ವಾದ ಪಡೆದ ಈಶ್ವರಪ್ಪ:
ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ನೂತನ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಮ್ಮ ಕುಟುಂಬ ಸಮೇತರಾಗಿ ಆಗಮಿಸಿ, ಸುತ್ತೂರು ಮಠದ ಪೀಠಾಧಿಪತಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಾದ ಪಡೆದರು. ಸುತ್ತೂರು ಶ್ರೀಗಳ ಆಶೀರ್ವಾದ ಪಡೆದ ನಂತರ ಅವರ ಜೊತೆ ಗೌಪ್ಯವಾಗಿ ಮಾತನಾಡಿ ಹೊರಟರು.