ಮೈಸೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿರುವುದನ್ನು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಸುಖಾಸುಮ್ಮನೆ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವ ಕೆ ವೆಂಕಟೇಶ್ ತಿರುಗೇಟು ನೀಡಿದ್ದಾರೆ.
ನಗರದ ಕಲಾ ಮಂದಿರದಲ್ಲಿ ಸರ್ಕಾರದ ಗೃಹ ಜ್ಯೋತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಆರೋಪಕ್ಕೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ವೈಎಸ್ಟಿ ಟ್ಯಾಕ್ಸ್ ಬಗ್ಗೆ ನನಗೆ ಗೊತ್ತಿಲ್ಲ. ಈ ಬಗ್ಗೆ ಕುಮಾರಸ್ವಾಮಿ ಅವರನ್ನೇ ಕೇಳಬೇಕು. ಕುಮಾರಸ್ವಾಮಿ ಅವರು ಯಾವಾಗಲೂ ಆರೋಪ ಮಾಡುತ್ತಿರುತ್ತಾರೆ. ಆದರೆ ಇದುವರೆಗೂ ಯಾವುದನ್ನೂ ಸಾಬೀತುಪಡಿಸಿಲ್ಲ. ಯಾವುದಾದರೂ ಆರೋಪವನ್ನು ಸಾಬೀತುಪಡಿಸಿದರೆ ನಾವು ನಂಬಬಹುದು. ಸುಖಾ ಸುಮ್ಮನೆ ಆರೋಪ ಮಾಡಿದರೆ ಏನು ಪ್ರಯೋಜನ ಎಂದು ಸಚಿವರು ಪ್ರಶ್ನಿಸಿದರು.
ಮಾಜಿ ಶಾಸಕ, ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವ ಕೆ ವೆಂಕಟೇಶ್, ಅಧಿಕಾರದಲ್ಲಿ ಇರುವವರ ಮೇಲೆ ಏನಾದರೊಂದು ಆರೋಪ ಮಾಡಲೇಬೇಕಲ್ಲ. ಅದಕ್ಕೆ ಆರೋಪ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಸೋತ ಕಾರಣ ವೈಯಕ್ತಿಕವಾಗಿ ದ್ವೇಷ ಹೆಚ್ಚಾಗಿದೆ. ಆದ್ದರಿಂದ ಈ ರೀತಿ ಮಾತನಾಡುತ್ತಿದ್ದಾರೆ. ಕುಮಾರಸ್ವಾಮಿ ಕಿಂಗ್ ಮೇಕರ್ ಆಗುವ ಆಸೆ ಹೊಂದಿದ್ದರು. ಆದರೆ ಅವರ ಆಸೆ ಈಡೇರಲಿಲ್ಲ. ಹಾಗಾಗಿ ಆರೋಪ ಮಾಡುತ್ತಿರಬಹುದು ಎಂದರು.