ಮೈಸೂರು :ಕಾಗಿನೆಲೆ ಶ್ರೀಗಳು ಮಾತನಾಡುವಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೈಕ್ ಕಿತ್ತುಕೊಂಡಿದ್ದು ಬಹಳ ನೋವಾಗಿದೆ. ಮುಖ್ಯಮಂತ್ರಿ ಅವರ ಈ ವರ್ತನೆ ಸರಿಯಲ್ಲ. ಯಾವುದಾದರೂ ದೊಡ್ಡ ಸಮುದಾಯದ ಮಠದ ಶ್ರೀಗಳ ಬಳಿ ಈ ರೀತಿ ಮೈಕ್ ಕಿತ್ತುಕೊಂಡಿದ್ದರೆ ಬಿಡುತ್ತಿದ್ದರೇ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಪ್ರಶ್ನಿಸಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಾಗಿನೆಲೆ ಶ್ರೀಗಳು ಮಾತನಾಡುವಾಗ ಮುಖ್ಯಮಂತ್ರಿ ಬೊಮ್ಮಾಯಿ ಅವರು ಮೈಕ್ ಕಿತ್ತುಕೊಂಡಿದ್ದು ಸರಿಯಲ್ಲ. ಮುಖ್ಯಮಂತ್ರಿಗಳ ವರ್ತನೆ ಸರಿಯಲ್ಲ ಎಂದು ಹೇಳಿದರು. ಇನ್ನು ನಿನ್ನೆ ಕಾಂಗ್ರೆಸ್ ನಾಯಕರನ್ನು ಮೈಸೂರಿನಲ್ಲಿ ಭೇಟಿಯಾದ ವಿಚಾರದ ಬಗ್ಗೆ ಬಳಿಕ ಮಾತನಾಡುತ್ತೇನೆ ಎಂದು ಪ್ರತಿಕ್ರಿಯಿಸಿದರು.
ಸಾಹಿತಿ ಎಸ್ ಎಲ್. ಭೈರಪ್ಪ ಅವರ ಮೋದಿ ಒಲೈಕೆ ಸರಿಯಲ್ಲ: ಮೋದಿಯಿಂದ ನನಗೆ ಪ್ರಶಸ್ತಿ ಬಂದಿತು ಎಂಬ ಎಸ್ ಎಲ್. ಭೈರಪ್ಪ ಹೇಳಿಕೆ ಸರಿಯಲ್ಲ. ನಿಮ್ಮ ವಯಸ್ಸಿನಲ್ಲಿ ಈ ರೀತಿ ಒಲೈಕೆ ಮಾಡುವುದು ಸರಿ ಕಾಣಲ್ಲ. ನಿಮ್ಮ ಬರವಣಿಗೆಗೆ ಈ ಪ್ರಶಸ್ತಿ ಬಂದಿದೆ. ನಿಮ್ಮ ಹೇಳಿಕೆ ಪ್ರಶಸ್ತಿಗೆ ಅವಮಾನ ಮಾಡಿದಂತೆ. ನೀವು ಬರವಣಿಗೆ ಆರಂಭಿಸಿದಾಗ ಮೋದಿಯವರು ಎಲ್ಲಿದ್ದರು ಎಂಬುದು ಗೊತ್ತಿಲ್ಲ ಎಂದು ವಿಶ್ವನಾಥ್ ಹೇಳಿದರು.
ಕರ್ನಾಟಕದ ಅಭಿವೃದ್ಧಿಗೆ ಎಸ್ ಎಂ. ಕೃಷ್ಣ ಕೊಡುಗೆ ಅಪಾರ: ಕರ್ನಾಟಕಕ್ಕೆ ಈ ಬಾರಿ ಎಂಟು ಜನರಿಗೆ ಪದ್ಮ ವಿಭೂಷಣ, ಪದ್ಮ ಭೂಷಣ ಹಾಗೂ ಪದ್ಮ ಶ್ರೀ ಪ್ರಶಸ್ತಿ ಬಂದಿದೆ. ಇದರಲ್ಲಿ ಎಸ್ ಎಂ.ಕೃಷ್ಣ ಅವರಿಗೆ ಪದ್ಮ ವಿಭೂಷಣ ಬಂದಿದ್ದು ಸಂತೋಷವಾಗಿದೆ. ಕರ್ನಾಟಕದ ಅಭಿವೃದ್ಧಿಗೆ ಅವರ ಕೊಡುಗೆ ಅಮೂಲ್ಯವಾದದ್ದು ಎಂದು ಎಸ್ ಎಂ. ಕೃಷ್ಣ ಅವರನ್ನು ಎಚ್. ವಿಶ್ವನಾಥ್ ಹಾಡಿ ಹೊಗಳಿದರು.