ಮೈಸೂರು :ಕನ್ನಡ ಚಿತ್ರರಂಗದ ಧ್ರುವತಾರೆಗಳಾದ ಡಾ.ರಾಜ್ ಕುಮಾರ್, ಅಂಬರೀಶ್ ಹಾಗೂ ಡಾ.ವಿಷ್ಣುವರ್ಧನ್ ಅವರ ಹೆಸರಿನಲ್ಲಿ ಆನೆಗಳು ಹಾಗೂ ಸಿಂಹವನ್ನು ಒಂದು ವರ್ಷದ ಮಟ್ಟಿಗೆ ದತ್ತು ಪಡೆಯುವ ಮೂಲಕ ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಅವರು ದಿಗ್ಗಜ ನಟರುಗಳಿಗೆ ಗೌರವ ಸೂಚಿಸಿದರು.
ಲಾಕ್ಡೌನ್ನಿಂದ ಮುಚ್ಚಲಾಗಿದ್ದ ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯಕ್ಕೆ ಇಂದು ಚಾಲನೆ ನೀಡಿದ ಸಚಿವರು, ಮೈಸೂರು ಮೂಲದ ಮೂವರು ನಟರಿಗೆ ಗೌರವ ಸೂಚಿಸಲು ಇದು ಸಕಾಲ. ಈ ನಿಟ್ಟಿನಲ್ಲಿ ಅವರ ಹೆಸರಿನಲ್ಲಿ ಪ್ರಾಣಿಗಳನ್ನು ದತ್ತು ಪಡೆಯುತ್ತಿದ್ದೇನೆ ಎಂದರು.
ಎರಡು ಆನೆ, ಒಂದು ಸಿಂಹ ದತ್ತು :ವರನಟ ರಾಜ್ ಕುಮಾರ್ ಹೆಸರಿನಲ್ಲಿ ಆನೆ ಹಾಗೂ ರೆಬೆಲ್ ಸ್ಟಾರ್ ಅಂಬರೀಶ್ ಹೆಸರಿನಲ್ಲಿ ಆಫ್ರಿಕನ್ ಆನೆ ಮತ್ತು ಸಾಹಸ ಸಿಂಹ ವಿಷ್ಣುವರ್ಧನ್ ಹೆಸರಿನಲ್ಲಿ ಸಿಂಹವನ್ನು ಸಚಿವರು ದತ್ತು ಪಡೆದುಕೊಂಡರು.
ಲಾಕ್ಡೌನ್ನಿಂದಾಗಿ ಸಾರ್ವಜನಿಕ ಪ್ರವೇಶಕ್ಕೆ ನಿಷೇಧ ಹೇರಿದ್ದರಿಂದ ಮೃಗಾಲಯಕ್ಕೆ ಆದಾಯ ಇರಲಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನವಿಲ್ಲದೆ, ನಿರ್ವಹಣೆ ಮಾಡುವುದೂ ಕಷ್ಟಕರವಾಗಿತ್ತು. ಸಮಸ್ಯೆಯನ್ನು ಸಚಿವರ ಗಮನಕ್ಕೆ ತಂದಾಗ ಅವರು ಸ್ಪಂದಿಸಿದ ರೀತಿ ನಿಜಕ್ಕೂ ಮಾದರಿ. ಆಪ್ತರಿಂದ ಹಾಗೂ ಜನಪ್ರತಿನಿಧಿಗಳಿಂದ ಮೃಗಾಲಯಕ್ಕೆ ₹ 3.23 ಕೋಟಿ ದೇಣಿಗೆ ಸಂಗ್ರಹಿಸಿಕೊಟ್ಟರು ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ಹೇಳಿದರು.
ಅಕ್ಕ ಸಂಸ್ಥೆಯಿಂದ ₹40 ಲಕ್ಷ: ಅಮೆರಿಕದ ಅಕ್ಕ ಸಂಸ್ಥೆಯಿಂದ ಮೃಗಾಲಯದ ನಿರ್ವಹಣೆಗೆಂದು ₹40 ಲಕ್ಷ ಚೆಕ್‌ನ ಇದೇ ವೇಳೆ ಸಂಸ್ಥೆಯ ಮಾಜಿ ಅಧ್ಯಕ್ಷ ಶಿವಮೂರ್ತಿ ಕಿಲಾರ ಅವರು ಮೃಗಾಲಯಕ್ಕೆ ಹಸ್ತಾಂತರಿಸಿದರು.