ಕರ್ನಾಟಕ

karnataka

ETV Bharat / state

ನಾರ್ಮಲ್ ಹೆರಿಗೆಗಳನ್ನೇ ಮಾಡಿಸಿ, ಅನಿವಾರ್ಯತೆ ಇದ್ದರೆ ಮಾತ್ರ ಸಿಜೇರಿಯನ್ ಮಾಡಿ: ವೈದ್ಯರಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಲಹೆ

ಮೈಸೂರಿನ ಕೆ.ಆರ್.ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಗೆ ಸಚಿವ ದಿನೇಶ್ ಗುಂಡೂರಾವ್, ಶಾಸಕರಾದ ಕೆ. ಹರೀಶ್ ಗೌಡ ಹಾಗು ಅನಿಲ್ ಚಿಕ್ಕಮಾದು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಚಿವ ದಿನೇಶ್ ಗುಂಡೂರಾವ್
ಸಚಿವ ದಿನೇಶ್ ಗುಂಡೂರಾವ್

By

Published : Jun 27, 2023, 3:22 PM IST

Updated : Jun 27, 2023, 4:09 PM IST

ಮೈಸೂರು : ನಗರದ ಜಿಲ್ಲಾಸ್ಪತ್ರೆಗೆ ಇಂದು ಭೇಟಿ ಕೊಟ್ಟ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಹೆರಿಗೆ ವಾರ್ಡ್‌ನಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯ ವಿಚಾರಿಸಿದರು. "ನಾರ್ಮಲ್ ಹೆರಿಗೆಗಳನ್ನು ಮಾಡಿಸಬೇಕು. ಅನಿವಾರ್ಯ ಸಂದರ್ಭವಿದ್ದಾಗ ಮಾತ್ರ ಸಿಜೇರಿಯನ್ ಮಾಡಬೇಕು. ರೋಗಿಗಳಿಗೆ ಹೊರಗೆ ಔಷಧಿ ತೆಗೆದುಕೊಂಡು ಬನ್ನಿ ಎಂದು ಚೀಟಿ ಬರೆದುಕೊಡಬಾರದು" ಎಂದು ಸಚಿವರು ಆಸ್ಪತ್ರೆಯ ಅಧೀಕ್ಷಕರಿಗೆ ಸೂಚನೆ ನೀಡಿದರು.

ರೋಗಿಗಳೊಂದಿಗೆ ಮಾತುಕತೆ ನಡೆಸುತ್ತಿರುವ ಸಚಿವ ದಿನೇಶ್ ಗುಂಡೂರಾವ್

ಮೈಸೂರು ಪ್ರವಾಸದಲ್ಲಿರುವ ದಿನೇಶ್ ಗುಂಡೂರಾವ್ ಅವರು, ಕೆ.ಆರ್. ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲಾ ಆಸ್ಪತ್ರೆಯ ವಾರ್ಡ್‌ಗಳಿಗೆ ಭೇಟಿ ನೀಡಿ ರೋಗಿಗಳ ಯೋಗಕ್ಷೇಮ ವಿಚಾರಿಸಿದರು. ಸ್ವಚ್ಛತೆ ಕಾಪಾಡಿಕೊಂಡಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿಶೇಷಚೇತನರಿಗೆ ನೀಡಿರುವ ಸೌಲಭ್ಯಗಳು ಮತ್ತು ರೋಗಿಗಳಿಗೆ ನೀಡುತ್ತಿರುವ ಚಿಕಿತ್ಸೆಯ ಬಗ್ಗೆ ಮಾಹಿತಿ ಪಡೆದುಕೊಂಡು ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ತಿಳಿಸಿದರು.

ಮೈಸೂರಿನ ಕೆ.ಆರ್.ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಗೆ ಸಚಿವ ದಿನೇಶ್ ಗುಂಡೂರಾವ್ ಭೇಟಿ

ನಂತರ ಸಭೆ ನಡೆಸಿದ ದಿನೇಶ್ ಗುಂಡೂರಾವ್, ಅಧಿಕಾರಿಗಳಿಂದ ಆಸ್ಪತ್ರೆ ಕುರಿತು ಮಾಹಿತಿ ಪಡೆದು, ತಾಲ್ಲೂಕು ಆಸ್ಪತ್ರೆಯವರು ರೋಗಿಗಳಿಗೆ ಹೆಚ್ಚಾಗಿ ಕೆ.ಆರ್.ಆಸ್ಪತ್ರೆಗೆ ರೆಫರ್ ಮಾಡುತ್ತಿದ್ದಾರೆ. ಇದರ ಬದಲು ಜಿಲ್ಲಾ ಆಸ್ಪತ್ರೆಗೆ ರೆಫರ್ ಮಾಡಬೇಕು. ಇದರಿಂದ ಕೆ.ಆರ್.ಆಸ್ಪತ್ರೆಯ ಒತ್ತಡ ಕಡಿಮೆ ಮಾಡುವ ಜೊತೆಗೆ ಜಿಲ್ಲಾಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ :'ಕಾಂಗ್ರೆಸ್​​ನಿಂದ ಬಂದ ಶಾಸಕರಿಂದ ಸರ್ಕಾರ ರಚಿಸಿ, ಶೇ 40- 50 ಕಮಿಷನ್ ಪಡೆದು ಹೀಗೆ ಮಾತನಾಡಿದರೆ ಹೇಗೆ?': ಈಶ್ವರಪ್ಪಗೆ ದಿನೇಶ್ ಗುಂಡೂರಾವ್‌ ತಿರುಗೇಟು

ಜಿಲ್ಲಾ ಆಸ್ಪತ್ರೆಯ ಅಧೀಕ್ಷಕ ಡಾ. ಅಮರನಾಥ್ ಮಾಹಿತಿ ನೀಡಿ, 180 ಅಕ್ಸಿಜಿನೇಟೆಡ್‌ ಬೆಡ್, 80 ಅನ್ ಅಕ್ಸಿಜೀನೇಟೆಡ್ ಬೆಡ್‌ಗಳಿವೆ. ಹುದ್ದೆಗಳು ಖಾಲಿ ಇದ್ದು ಭರ್ತಿ ಮಾಡಬೇಕು. 10 ನರ್ಸ್‌ಗಳು ಅಗತ್ಯವಾಗಿ ಬೇಕಿದ್ದಾರೆ. ಟೆಂಡರ್ ಮೂಲಕ ರೋಗಿಗಳಿಗೆ ಪತ್ಯಾಹಾರ ನೀಡುತ್ತಾರೆ. ಬೆಳಿಗ್ಗೆ ಬ್ರೆಡ್, ಹಾಲು, ಮಧ್ಯಾಹ್ನ ಮೊಟ್ಟೆ ಊಟ ಹಾಗೂ ಸಂಜೆ ಊಟ ನೀಡುತ್ತಾರೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್ ಅವರು, ಬೆಳಿಗ್ಗೆ ಬ್ರೆಡ್ ಬದಲು ಇಡ್ಲಿ, ಉಪ್ಪಿಟ್ಟು ಹಾಗೂ ಇತರೆ ತಿಂಡಿಗಳನ್ನು ನೀಡುವಂತೆ ಸಲಹೆ ಕೊಟ್ಟರು.

ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಹರೀಶ್ ಗೌಡ, ಹಾಗು ಹೆಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗಳಾದ ಟಿ.ಕೆ. ಅನಿಲ್ ಕುಮಾರ್, ಆಯುಕ್ತರಾದ ರಂದೀಪ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪ್ರಸಾದ್ ಹಾಗೂ ವೈದ್ಯಾಧಿಕಾರಿಗಳು ಇದ್ದರು.

ಇದನ್ನೂ ಓದಿ :ಜನಸಾಮಾನ್ಯರಿಗೆ ಆರೋಗ್ಯ ಸೇವೆ: ಸರ್ಕಾರಿ ವೈದ್ಯರ ಪ್ರೈವೇಟ್​ ಪ್ರಾಕ್ಟಿಸ್​ ನಿಷೇಧ ಸೇರಿ 21 ಅಂಶಗಳ ವರದಿ ಸಲ್ಲಿಸಿದ ಆಡಳಿತ ಸುಧಾರಣಾ ಆಯೋಗ

Last Updated : Jun 27, 2023, 4:09 PM IST

ABOUT THE AUTHOR

...view details