ಮೈಸೂರು: ಬಿಜೆಪಿಯವರು ನಗರಾಭಿವೃದ್ಧಿ ಇಲಾಖೆಯಲ್ಲಿ ತೆರಿಗೆ ಹೆಚ್ಚಳ ಮಾಡಿದ್ದಾರೆ ಎಂದು ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ತೆರಿಗೆ ಜಾಸ್ತಿ ಮಾಡುವುದು ಹಾಗೂ ಕಡಿಮೆ ಮಾಡುವುದು ಸರ್ಕಾರದ ನಿರ್ಧಾರ. ನಾವು ಜನರಿಗೆ ಹೊರೆಯಾಗದ ರೀತಿಯಲ್ಲಿ ತೆರಿಗೆ ನಿರ್ಧಾರ ಮಾಡುತ್ತೇವೆ. ಬಿಜೆಪಿಯವರು 40% ಕಮಿಷನ್ ಸಿಗುತ್ತಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಪಕ್ಷವನ್ನು ಜನ ಓಡಿಸಿದ್ದಾರೆ ಎಂದು ಮೈಸೂರಿನಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹೇಳಿಕೆ ನೀಡಿದರು.
ಮೈಸೂರು ವಿಭಾಗದ ನಗರಾಭಿವೃದ್ಧಿ ಇಲಾಖೆಯ ಸಭೆ ನಡೆಸಲು ಇಂದು ಮೈಸೂರಿಗೆ ಆಗಮಿಸಿದ ಸಚಿವ ಭೈರತಿ ಸುರೇಶ್ ಮಾಧ್ಯಮಗಳ ಜೊತೆ ಮಾತನಾಡಿ, ಇಂದು ಮೈಸೂರು ವಿಭಾಗದ ನಗರಾಭಿವೃದ್ಧಿ ಇಲಾಖೆಯ ಸಭೆ ಮಾಡುತ್ತೇವೆ. ಈ ಸಭೆಯಲ್ಲಿ ಪೌರಾಡಳಿತ ಇಲಾಖೆಯ ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ. ಪ್ರಮುಖವಾಗಿ ಕುಡಿಯುವ ನೀರಿನ ವಿಚಾರದಲ್ಲಿ ಚರ್ಚೆ ನಡೆಸಲಾಗುತ್ತದೆ. ಸದ್ಯಕ್ಕೆ ಕುಡಿಯುವ ನೀರಿನ ಅಭಾವವಿಲ್ಲ. ಈಗಾಗಲೇ ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ನಮ್ಮ ಇಲಾಖೆಯಿಂದ 30 ಕೋಟಿ ಹಣ ನೀಡಲಾಗಿದೆ. ಈ ಹಣದಲ್ಲಿ ಬೋರ್ವೆಲ್ ರಿಪೇರಿ, ಟ್ಯಾಂಕ್ ರಿಪೇರಿ ಹಾಗೂ ಇತರ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಉಪಯೋಗಿಸಿಕೊಳ್ಳಲು ತಿಳಿಸಲಾಗಿದೆ ಎಂದು ತಿಳಿಸಿದರು.