ಮೈಸೂರು: ಜಾಲತಾಣಗಳಲ್ಲಿ ಪರಿಚಯವಾಗುವ ಮುನ್ನ ಒಮ್ಮೆ ಯೋಚಿಸಬೇಕು. ಏಕೆಂದರೆ ಫ್ರೆಂಡ್ ರಿಕ್ವೆಸ್ಟ್ ನೆಪದಲ್ಲಿ ಮೊಸ ಮಾಡುವ ಜನರು ಇರುತ್ತಾರೆ. ರಾಜಸ್ಥಾನದ ಮೂಲದ ವರ್ತಕನಾದ ಅಮರ್ ಸಿಂಗ್ ಎಂಬಾತನನ್ನು ಫೇಸ್ಬುಕ್ ಮೂಲಕ ಪರಿಚಯವಾದ ಮಹಿಳೆಯೊಬ್ಬಳು, ಆತನಿಗೆ ನಿನ್ನನ್ನೇ ಮದುವೆಯಾಗುತ್ತೇನೆ ಎಂದು ಆಸೆ ತೋರಿಸಿ 10.29 ಲಕ್ಷ ರೂಪಾಯಿ ಹಣ ಹಾಗೂ 19 ಗ್ರಾಂ ಚಿನ್ನ ಪಡೆದು ವಂಚಿಸಿರುವ ಘಟನೆ ನಡೆದಿದೆ. ಈ ಸಂಬಂಧ ಜಿಲ್ಲಾ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫೇಸ್ಬುಕ್ ಮೂಲಕ ಪರಿಚಯ:ನಂಜನಗೂಡು ಪಟ್ಟಣದಲ್ಲಿ ರಾಜಸ್ಥಾನ ಮೂಲದ ಅಮರ್ ಸಿಂಗ್ ಎಂಬಾತನು ಕಳೆದ ಮೂರೂವರೆ ವರ್ಷದಿಂದ ತನ್ನ ದೊಡ್ಡಪ್ಪನ ಮಗನಾದ ಅಶೋಕನ ಬಳಿ ಪಾತ್ರೆ ವ್ಯಾಪಾರ ಮಾಡಿಕೊಂಡಿದ್ದಾನೆ. ಅಮರ್ ಸಿಂಗ್ ಉತ್ತಮ ವ್ಯಾಪಾರ ನಡೆಸಿಕೊಂಡು ಬರುತ್ತಿದ್ದ, ಈತನಿಗೆ ಆಗ ವಿಜಯ ರಜಿನಿ ಎಂಬ ಮಹಿಳೆ ಸಾಮಾಜಿಕ ಜಾಲಾತಾಣದ ಮೂಲಕ ಪರಿಚಯವಾಗಿದ್ದಳು.
ಮೊಬೈಲ್ನಲ್ಲಿ ಚಾಟಿಂಗ್ ಮಾಡುತ್ತಿದ್ದ ಈತ ಆಕೆ ಕೇಳಿದ ವಸ್ತುಗಳನ್ನೆಲ್ಲ ಕೊಡಿಸಿದ್ದನು. ಅಮರ್ ಸಿಂಗ್ ಜೊತೆ ಚೆನ್ನಾಗಿಯೇ ಇದ್ದ ಮಹಿಳೆ ಮದುವೆಯಾಗುತ್ತೇನೆ ಎಂದು ಸಹ ನಂಬಿಸಿದ್ದಳು. ನಂಬಿಸಿ ಆತನ ಜೊತೆಗೆ ಹಲವಾರು ಕಡೆ ಸುತ್ತಾಡುತ್ತಿದ್ದಳು. ಕೆಲವು ದಿನಗಳ ನಂತರ ಆಕೆಯು ಅಮರ್ ಸಿಂಗ್ ಜೊತೆ ಚಾಟಿಂಗ್ ಮಾಡುವುದನ್ನು ನಿಲ್ಲಿಸಿದ್ದಾಳೆ. ಚ್ಯಾಟ್ ಮಾಡುವುದನ್ನು ನಿಲ್ಲಿಸಿರುವ ವಿಜಯ ರಂಜಿನಿ ಕೊನೆಗೆ ಈತನ ಮೆಸೇಜ್ ಬಾರದಂತೆ ಫೇಸ್ಬುಕ್ನಲ್ಲಿ ಬ್ಲಾಕ್ ಮಾಡಿದ್ದಾಳೆ ಎಂದು ದೂರಿನಲ್ಲಿ ದಾಖಲಾಗಿದೆ.
ವರ್ತಕನಿಗೆ ಬೆದರಿಕೆ ಹಾಕಿದ ಮಹಿಳೆ:ಮೊದ ಮೊದಲು ಅಮರ್ ಸಿಂಗ್ ಜೊತೆ ಚೆನ್ನಾಗಿದ್ದ ವಿಜಯ ರಂಜಿನಿ ಕೆಲವು ದಿನಗಳ ನಂತರ, ಅವನ ಜೊತೆ ಹೊರಗಡೆ ಸುತ್ತುವುದನ್ನು ಕಡಿಮೆ ಮಾಡಿದ್ದಾಳೆ. ಕೊನೆಗೆ ಅವನ ಜೊತೆ ಹೊರಗಡೆ ಹೋಗುವುದನ್ನೇ ಬಿಟ್ಟಿದ್ದಾಳೆ. ಅಮರ್ ಸಿಂಗ್ ಎಷ್ಟೇ ಫೋನ್ ಕರೆ ಮಾಡಿದರೂ ವಿಜಯ ರಂಜಿನಿ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಅಮರ್ ಸಿಂಗ್ ಜೊತೆ ತಿರುಗಾಡಿ ಅವನಿಂದ ಚಿನ್ನ, ಬೆಲೆ ಬಾಳುವ ವಸ್ತುಗಳನ್ನು ತೆಗಿಸಿಕೊಂಡು, ನಂತರ ಅವನನ್ನೇ ನಿಯಂತ್ರಿಸಲು ಪ್ರಾರಂಭಿಸಿದ್ದಳು.
ಪದೇ ಪದೆ ಕರೆ ಮಾಡಿದಾಗ ಅವನಿಗೆ ಬೆದರಿಕೆ ಹಾಕಲು ಶುರು ಮಾಡಿದ್ದಳು. ನಾನು ನಿನ್ನನ್ನು ಮದುವೆಯಾಗುವುದಿಲ್ಲವೆಂದು ಬೆದರಿಕೆಯೊಡ್ಡಿದ್ದಳು. ನನ್ನ ತಂಟೆಗೆ ಬಂದರೆ ನನ್ನ ಕಡೆಯವರು ನಿನಗೆ ಬುದ್ಧಿ ಕಲಿಸುತ್ತಾರೆ ಎಂದು ಅಮರ್ ಸಿಂಗ್ಗೆ ಹೆದರಿಸಿದ್ದಳು ಎಂದು ದೂರಿನಲ್ಲಿ ವಿವರಿಸಲಾಗಿದೆ. ವಿಜಯ ರಂಜಿನಿ, ಅಮರ್ ಸಿಂಗ್ ಜೊತೆ ಒಡಾಡುತ್ತಿದ್ದಾಗ ಅವಳು ಕೇಳಿದಂತೆಲ್ಲ ಅವನು ಆಕೆಯ ಖಾತೆಗೆ ಒಟ್ಟು 10,29,403 ರೂಪಾಯಿ ಹಣ ವರ್ಗಾವಣೆ ಮಾಡಿದ್ದಾನೆ. ಜೊತೆಗೆ ಸೇಲಂನಲ್ಲಿ ಅವಳಿಗೆ 12.450 ಗ್ರಾಂ ಬ್ರ್ಯಾಸ್ ಲೈಟ್, 3.680 ಗ್ರಾಂ ಕಿವಿಯೋಲೆ ಮಾಡಿಸಿಕೊಟ್ಟಿದ್ದಾನೆ.
ಈತನ ಮೆಸೇಜ್ಗೆ ಆಕೆಯಿಂದ ಯಾವುದೇ ಪ್ರತಿಕ್ರಿಯೆ ಇಲ್ಲದಾಗ ರಾಮ್ ಸಿಂಗ್ ಆಕೆಗೆ ಕರೆ ಮಾಡಿದ್ದಾನೆ. ಆಗ ಪ್ರಾರಂಭದಲ್ಲಿ ತನಗೆ ಆರೋಗ್ಯ ಸರಿ ಇಲ್ಲ ಎಂದು ಸಬೂಬು ಹೇಳಿದ್ದಾರೆ. ಈತನಿಂದ ಕರೆ ಬರುವುದು ಮುಂದುವರಿದಾಗ ಬೆದರಿಕೆಯೊಡ್ಡಿ, ನಿನ್ನನ್ನು ಮದುವೆಯಾಗುವುದಿಲ್ಲ ಎಂದು ಹೇಳಿ ನಂಬರ್ ಬ್ಲಾಕ್ ಮಾಡಿದ್ದಾಳೆ. ಆ ವೇಳೆ ಅಮರ್ ಸಿಂಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಮೈಸೂರು ಜಿಲ್ಲಾ ಸೆನ್ ಠಾಣೆ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಮಹಿಳೆಯರ ಧ್ವನಿಯಲ್ಲಿ ಸಂಭಾಷಣೆ: ಸಂಬಂಧ ಬೆಸೆದು ಹಣ ಗಳಿಸುವ ಆಸೆ, ಯುವಕರಿಗೆ ವಂಚನೆ