ಮೈಸೂರು: ಕೊರೊನಾ ಆರ್ಭಟದ ನಡುವೆ ಈ ಬಾರಿ ದಸರಾವನ್ನು ಯಾವ ರೀತಿ ಆಚರಿಸಬೇಕು ಎಂಬ ಗೊಂದಲದಲ್ಲಿ ರಾಜ್ಯ ಸರ್ಕಾರವಿದೆ. ಹೀಗಾಗಿ ಮೈಸೂರಿನಲ್ಲಿ ಸೆ.8 ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ದಸರಾ ಆಚರಣೆ ಕುರಿತಾದ ಉನ್ನತ ಮಟ್ಟದ ಸಭೆ ನಡೆಯಲಿದೆ.
2020ರ ದಸರಾ ಮಹೋತ್ಸವ ಹೇಗೆ ನಡೆಯಬೇಕು ಎಂಬ ನಿರ್ಧಾರ ಈ ಸಭೆಯ ಬಳಿಕ ಪ್ರಕಟಗೊಳ್ಳಲಿದೆ. ಈ ಬಾರಿ ಗಜಪಡೆಯ ಕ್ಯಾಪ್ಟನ್ ಅರ್ಜುನನಿಗೆ ಚಿನ್ನದ ಅಂಬಾರಿ ಹೊತ್ತು ಸಾಗುವುದು ಕಡೆಯ ಬಾರಿಯಾಗಿದೆ.
ಕಡೆಯ ಬಾರಿ ಅಂಬಾರಿ ಹೊರಲಿರುವ ಅರ್ಜುನ ನಾಡಿನ ಅಧಿದೇವತೆ ಚಾಮುಂಡೇಶ್ವರಿ ವಿಗ್ರಹವನ್ನು ಚಿನ್ನದ ಅಂಬಾರಿಯಲ್ಲಿ 8 ಬಾರಿ ಹೊತ್ತು ಸಾಗಿರುವ ಗಜಪಡೆಯ ಕ್ಯಾಪ್ಟನ್ ಅರ್ಜುನನಿಗೆ, 2020ರ ದಸರಾ ಮಹೋತ್ಸವದಲ್ಲಿ ಅದ್ಧೂರಿಯಾಗಿ ಬೀಳ್ಕೊಡಬೇಕು ಎಂದು ಅಧಿಕಾರಿಗಳ ಯೋಜಿಸಿದ್ದರು.
ಆದರೆ, ಕೊರೊನಾ ಮಹಾಮಾರಿ ಎಲ್ಲೆಡೆ ಆವರಿಸಿರುವುದರಿಂದ ದಸರಾ ಮೇಲೆ ಗಾಢ ಪರಿಣಾಮ ಬೀರಿದೆ. ದಸರಾ ಸರಳವಾಗಿ ನಡೆಯುವ ಮುನ್ಸೂಚನೆ ಸಿಗುತ್ತಿರುವುದರಿಂದ ದಸರಾ ಮಹೋತ್ಸವದ ಮೆರವಣಿಗೆ ಅರಮನೆ ಅಂಗಳಕ್ಕೆ ಮಾತ್ರ ಸೀಮಿತವಾಗುವ ಸಾಧ್ಯತೆ ಇದೆ. ಚಿನ್ನದ ಅಂಬಾರಿ ಹೊತ್ತು ಸಾರ್ವಜನಿಕರ ನಡುವೆ 5 ಕಿಮೀ ದೂರದ ಬನ್ನಿಮಂಟಪದವರೆಗೆ ಸಾಗುತ್ತಿದ್ದ ಅರ್ಜುನ, ಈ ಬಾರಿ ಮೆರವಣಿಗೆ ಅರಮನೆ ಅಂಗಳಕ್ಕೆ ಮಾತ್ರ ಸೀಮಿತವಾಗಲಿದ್ದಾನೆ.
ಅರಮನೆ ಆವರಣದಲ್ಲಿಯೇ ದಸರಾ ಮೆರವಣಿಗೆ ಸೀಮಿತವಾದರೆ, ಕಡೆಯ ಬಾರಿ ಅಂಬಾರಿ ಹೊರುವ ಅರ್ಜುನನಿಗೆ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಸರಳವಾಗಿ ಬೀಳ್ಕೊಡುಗೆ ಸಿಗಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.