ಮೈಸೂರು: ನಾಡ ಹಬ್ಬ ದಸರಾ ಮಹೋತ್ಸವ-2019ರ ಪೂರ್ವ ಸಿದ್ಧತೆಯ ಬಗ್ಗೆ ಚರ್ಚೆ ಮಾಡಲು ಉನ್ನತ ಮಟ್ಟದ ಸಭೆಯು ಅಗಸ್ಟ್ 9ರಂದು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ವಿಧಾನಸಭೆಯಲ್ಲಿ ನಡೆಯಲಿದೆ. ಅದರ ಪೂರ್ವಭಾವಿ ಸಭೆಯಾಗಿ ಇಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅಧಿಕಾರಿಗಳ ಸಭೆ ನಡೆಸಿದರು.
ವಿಶ್ವ ವಿಖ್ಯಾತ ನಾಡ ಹಬ್ಬ ದಸರಾ-2019 ಆರಂಭವಾಗಲು ಕೇವಲ 56 ದಿನಗಳು ಮಾತ್ರ ಉಳಿದಿದ್ದು, ಈ ಬಾರಿಯ ದಸರಾ ಉನ್ನತ ಮಟ್ಟದ ಸಭೆ ನಡೆದಿಲ್ಲ. ಆದರೆ, ಈಗ ಎಚ್ಚೆತ್ತ ನೂತನ ಸರ್ಕಾರ ಇದೇ ತಿಂಗಳ ಅಗಸ್ಟ್ 9ರಂದು ಶುಕ್ರವಾರ 12 ಗಂಟೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ದಸರಾ-2019ರ ಆಚರಿಸುವ ಸಂಬಂಧ ಪೂರ್ವಭಾವಿ ಸಭೆ ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆಯಲಿದ್ದು, ಸ್ಥಳೀಯ ಶಾಸಕರು ಸಹ ಭಾಗವಹಿಸಲಿದ್ದಾರೆ.
ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅಧಿಕಾರಿಗಳ ಜತೆಗೆ ಸಭೆ ನಡೆಸಿದರು.. ಅಧಿಕಾರಿಗಳ ಸಭೆಯಲ್ಲಿ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ನೀಡುವ ಸೂಚನೆಯಂತೆ ಈ ಬಾರಿಯ ದಸರಾ ಮಹೋತ್ಸವವನ್ನು ಆಚರಿಸಬೇಕಾಗುತ್ತದೆ. ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ಕೈಗೊಳ್ಳುವ ಸ್ವಚ್ಛತೆ, ನೈರ್ಮಲ್ಯ ಮುಂತಾದ ಕಾರ್ಯಕ್ರಮಗಳಿಗೆ ಬೇಕಾದ ತಯಾರಿಯನ್ನು ಈಗಿನಿಂದಲೇ ಮಾಡಿಕೊಳ್ಳಬೇಕಾಗುತ್ತದೆ. ಹಾಗೂ ದೀಪಾಲಂಕಾರ ಕಳೆದ ವರ್ಷ ಎಲ್ಲರ ಮೆಚ್ಚುಗೆ ಪಡೆದುಕೊಂಡಿತ್ತು. ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ನೀಡುವ ಮಾರ್ಗದರ್ಶನದಂತೆ ಈ ಬಾರಿಯ ದಸರಾವನ್ನು ಎಲ್ಲರೂ ಮೆಚ್ಚುವಂತೆ ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಬೇಕಾವುದು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಕೆ.ಜ್ಯೋತಿ, ಪೊಲೀಸ್ ಅಧೀಕ್ಷ ರಿಶ್ಯಂತ್, ಅಪರ ಜಿಲ್ಲಾಧಿಕಾರಿ ಬಿ ಆರ್ ಪೂರ್ಣಿಮಾ, ಮುಡಾ ಆಯುಕ್ತ ಕಾಂತರಾಜು, ಡಿಸಿಪಿ ಕವಿತಾ, ಅಪರ ಪೊಲೀಸ್ ಅಧೀಕ್ಷಕಿ ಪಿ ವಿ ಸ್ನೇಹಾ ಮತ್ತಿತರ ಅಧಿಕಾರಿಗಳು ಹಾಜರಿದ್ದರು.
ಉನ್ನತ ಮಟ್ಟದ ಸಭೆ ಕುರಿತು ಸೂಚನೆ ಇದೇ ಮೊದಲ ಬಾರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಇಲ್ಲದೆ ಪೂರ್ವಭಾವಿ ಉನ್ನತ ಮಟ್ಟದ ಸಭೆ ನಡೆಯುತ್ತಿದ್ದು, ಜೊತೆಗೆ ಈ ಬಾರಿ ಉನ್ನತ ಮಟ್ಟದ ಸಭೆ ಪ್ರತಿ ವರ್ಷಕ್ಕಿಂತ 1 ತಿಂಗಳು ತಡವಾಗಿ ನಡೆಯುತ್ತಿದೆ. ಈ ಸಭೆಗೆ ಮೈಸೂರು ಜಿಲ್ಲೆಯ ದಸರಾ ವಿಶೇಷ ಅಧಿಕಾರಿಗಳಾದ ಜಿಲ್ಲಾಧಿಕಾರಿ ಸೇರಿದಂತೆ ಎಲ್ಲಾ ಅಧಿಕಾರಿಗಳು ತಪ್ಪದೇ ಭಾಗವಹಿಸಬೇಕೆಂದು ತಿಳಿಸಲಾಗಿದೆ.