ಮೈಸೂರು: ಅಂತಿಮ ವರ್ಷದ ವೈದ್ಯಕೀಯ ಪರೀಕ್ಷೆಯನ್ನು ಎರಡು ತಿಂಗಳು ಮುಂದೂಡಲಾಗಿದೆ ಎಂದು ಆರೋಗ್ಯ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೋವಿಡ್ ಅಲೆ ಹೆಚ್ಚಾಗುತ್ತಿರುವುದರಿಂದ ಆರೋಗ್ಯ ಸೇವೆ ಒದಗಿಸಲು ವೈದ್ಯಕೀಯ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗುವುದು ಎಂದರು.
ದುಡ್ಡಿಗಾಗಿ ಕೋವಿಡ್ ರಿಪೋರ್ಟ್ ಮಾರಾಟ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿ, ಅಯೋಗ್ಯನ ವಿರುದ್ಧ ಕಠಿಣ ಕ್ರಮಕ್ಕೆ ಆರೋಗ್ಯ ಆದೇಶ ನೀಡಿದ್ದೇನೆ. ಯಾರೋ ಒಬ್ಬ ಅಯೋಗ್ಯ ಮಾಡುವ ತಪ್ಪಿಗೆ ಎಲ್ಲ ಕೇಂದ್ರಗಳ ಬಗ್ಗೆ ಹೇಳೋದು ಬೇಡ. ಕಾರಿನಲ್ಲಿ ಬರುವಾಗಲೇ ನಾನು ಬಿಬಿಎಂಪಿ ಆಯುಕ್ತರ ಜತೆ ಮಾತನಾಡಿದ್ದೇನೆ ಎಂದರು.
ಅದು ಯಾವ ಕೇಂದ್ರ ಎಂದು ಪತ್ತೆ ಮಾಡಿ ಕಠಿಣ ಕ್ರಮ ವಹಿಸುವಂತೆ ಹೇಳಿದ್ದೇನೆ. ಇದನ್ನು ವೈಭವೀಕರಣ ಮಾಡುವುದು ಬೇಡ. ವ್ಯವಸ್ಥೆಯಲ್ಲಿ ಕೆಲಸ ಮಾಡುವ ಸಾವಿರಾರು ಜನರ ನೈತಿಕ ಸ್ಥೈರ್ಯ ಕುಗ್ಗಿಸುವಂತಾಗುತ್ತದೆ. ಇತರೆ ಎಲ್ಲಾ ಕೇಂದ್ರಗಳು ಅತಿಯಾಗಿ ಕೆಲಸ ಮಾಡುತ್ತಿವೆ ಎಂದು ಹೇಳಿದರು.
ಇದನ್ನೂ ಓದಿ:ಜನರ ಸಾವಿನ ಮನೆಯಲ್ಲಿ ಚೆಲ್ಲಾಟವಾಡಬೇಡಿ: ಸರ್ಕಾರದ ವಿರುದ್ಧ ಹೆಚ್ಡಿಕೆ ವಾಗ್ದಾಳಿ
ಮೈಸೂರಿನಲ್ಲಿ ಬೆಡ್ ಹಾಗೂ ಆಕ್ಸಿಜನ್ಗೆ ಕೊರತೆ ಇಲ್ಲ. ಹಾಗಾಗಿ ಜನತೆ ಆತಂಕಪಡುವ ಅಗತ್ಯವಿಲ್ಲ ಎಂದರು.
ಮೈಸೂರಿನ ಮೇಟಗಳ್ಳಿಯ ಜಿಲ್ಲಾ ಕೋವಿಡ್ ಆಸ್ಪತ್ರೆ, ಟ್ರಾಮಾ ಸೆಂಟರ್‌ನಲ್ಲಿ ತೆರೆಯಲಾಗಿರುವ ಕೋವಿಡ್ ಕೇರ್ ಸೆಂಟರ್, ಕೆ.ಆರ್.ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು ವೈದ್ಯಾಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದರು. ಆಸ್ಪತ್ರೆಗಳ ಮೂಲ ಸೌಕರ್ಯ, ಸಾಮರ್ಥ್ಯ ಹೆಚ್ಚಿಸಲು ಸೂಚನೆ ನೀಡಿದರು. ಕೊಲಂಬಿಯಾ, ನಾರಾಯಣ ಹೃದಯಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.