ಮೈಸೂರು: ಮಂಗಳೂರಿನಲ್ಲಿ ಇತ್ತೀಚೆಗೆ ಆಟೋವೊಂದರಲ್ಲಿ ನಡೆದ ನಿಗೂಢ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ವಾಸವಿದ್ದ ಶಂಕಿತನ ಕೊಠಡಿಯನ್ನು ಕಳೆದ ಮಧ್ಯರಾತ್ರಿಯವರೆಗೆ ತಪಾಸಣೆ ನಡೆಸಿರುವ ತನಿಖಾಧಿಕಾರಿಗಳು ಮೂವರನ್ನು ವಶಕ್ಕೆ ಪಡೆದು ಮಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ.
ತನಿಖೆಯ ಜಾಡು ಹಿಡಿದು..: ಶಂಕಿತ ಆರೋಪಿ ಶಾರಿಕ್ ಮೈಸೂರಿನ ಲೋಕನಾಯಕ್ ನಗರದಲ್ಲಿ ಕೊಠಡಿಯೊಂದನ್ನು ಬಾಡಿಗೆಗೆ ಪಡೆದಿದ್ದ. ಅಲ್ಲಿ ಸ್ಫೋಟಕ ವಸ್ತುಗಳನ್ನು ತಯಾರು ಮಾಡಿ ಕುಕ್ಕರ್ನಲ್ಲಿ ಇಟ್ಟುಕೊಂಡು ಬಸ್ಸಲ್ಲಿ ಮಂಗಳೂರಿಗೆ ತೆರಳಿದ್ದಾನೆ. ಆ ಬಳಿಕ ಅಲ್ಲಿ ಆಟೋ ರಿಕ್ಷಾದಲ್ಲಿ ತೆಗೆದುಕೊಂಡು ಹೋಗುವಾಗ ಕುಕ್ಕರ್ ಮಾದರಿಯ ವಸ್ತು ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಇದರಲ್ಲಿ ಶಂಕಿತನೂ ಗಾಯಗೊಂಡು ಆಸ್ಪತ್ರೆ ಸೇರಿದ್ದ.
ಈ ಘಟನೆಯ ಬೆನ್ನು ಹತ್ತಿದ ಮಂಗಳೂರು ಪೊಲೀಸರು ಶಂಕಿತ ವಾಸವಿದ್ದ ಮೈಸೂರಿನ ಲೋಕನಾಯಕ್ ನಗರದ ಮನೆಯ ಮೇಲೆ ದಾಳಿ ಮಾಡಿದ್ದರು. ಬಾಂಬ್ ಪತ್ತೆ ದಳ ಹಾಗೂ ಎಫ್ಎಸ್ಎಲ್ ತಂಡ ಶಂಕಿತ ವಾಸವಿದ್ದ ಕೊಠಡಿ ಪರಿಶೀಲಿಸಿದಾಗ ಸ್ಫೋಟಕಗಳನ್ನು ತಯಾರು ಮಾಡುವ ವಸ್ತುಗಳಿರುವುದು ಗೊತ್ತಾಗಿದೆ.