ಮೈಸೂರು:ಮಂಡ್ಯ ಸಂಸದೆ ಸುಮಲತಾ ಬಿಜೆಪಿ ಸೇರಲಿದ್ದು, ನಾಳೆ ಮೋದಿ ಕಾರ್ಯಕ್ರಮದಲ್ಲಿ ಸೇರ್ಪಡೆಯಾಗುವ ಪ್ಲಾನ್ ಮಾಡಿದ್ದರು. ಆದರೆ ಅದು ಸರ್ಕಾರಿ ಕಾರ್ಯಕ್ರಮವಾಗಿದ್ದು ಪಕ್ಷ ಸೇರ್ಪಡೆಗೆ ಅವಕಾಶ ಇಲ್ಲ ಎಂದು ಮೇಲುಕೋಟೆ ಜೆಡಿಎಸ್ ಶಾಸಕ ಸಿ.ಎಸ್.ಪುಟ್ಟರಾಜು ಮೈಸೂರಿನಲ್ಲಿ ಅಚ್ಚರಿಯ ಹೇಳಿಕೆ ನೀಡಿದರು.
ಚಾಮುಂಡಿ ಬೆಟ್ಟದ ಬಲಭಾಗದಲ್ಲಿರುವ ಉತ್ತನಹಳ್ಳಿ ಬಳಿ ಮಾರ್ಚ್ 26ರಂದು ನಡೆಯುವ ಪಂಚರತ್ನ ಯಾತ್ರೆಯ ಐತಿಹಾಸಿಕ ಸಮಾರೋಪ ಸಮಾರಂಭದ ವೇದಿಕೆ ನಿರ್ಮಾಣ ಮಾಡುವ ಸ್ಥಳದಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಗಿದ್ದು, ಈ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಜೆಡಿಎಸ್ ಶಾಸಕರಾದ ಸಿ.ಎಸ್.ಪುಟ್ಟರಾಜು, ಸಾ.ರಾ.ಮಹೇಶ್, ಅಶ್ವಿನ್ ಕುಮಾರ್, ಕೆ.ಮಹದೇವ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು. ನೂರು ಎಕರೆ ವಿಸ್ತೀರ್ಣದಲ್ಲಿ ವೇದಿಕೆ ಹಾಗೂ ಸಮಾರಂಭ ನಡೆಯುವ ಸ್ಥಳದಲ್ಲಿ ಪೆಂಡಾಲ್ ಹಾಕುವ ಕೆಲಸ ಆರಂಭವಾಗಿದೆ.
ಪುಟ್ಟರಾಜು ಹೇಳಿದ್ದೇನು?:ಭೂಮಿ ಪೂಜೆ ನೆರವೇರಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಸಿ.ಎಸ್.ಪುಟ್ಟರಾಜು, ಮೈಸೂರು- ಬೆಂಗಳೂರು ದಶಪಥ ಹೆದ್ದಾರಿ ನಿರ್ಮಾಣದ ವಿಚಾರದಲ್ಲಿ ಜೆಡಿಎಸ್ ಪಾಲು ಇದೆ. ಈ ಹೆದ್ದಾರಿಯನ್ನು ಪ್ರತಾಪ್ ಸಿಂಹ ನಿರ್ಮಾಣ ಮಾಡಲು ಗುತ್ತಿಗೆ ಅವರಿಗೆ ಕೊಟ್ಟಿಲ್ಲ, ನಾನೊಬ್ಬನೇ ಹೆದ್ದಾರಿ ಮಾಡಿಸಿದ್ದೇನೆ ಎಂದು ಹೇಳಿಕೊಂಡು ಪ್ರತಾಪ್ ಸಿಂಹ ತಿರುಗಾಡುತ್ತಿದ್ದಾರೆ. ನಾನೂ ಸಹ ಎಂಪಿ ಆಗಿದ್ದೆ, ದೆಹಲಿಯಲ್ಲಿ ಏನೆಲ್ಲ ಹೋರಾಟ ಮಾಡಿದೆ ಎಂದು ಯಡಿಯೂರಪ್ಪನವರನ್ನು ಕೇಳಿ ಪ್ರತಾಪ್ ಸಿಂಹ ತಿಳಿದುಕೊಳ್ಳಲಿ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಮೈತ್ರಿ ಸರ್ಕಾರ ಇದ್ದಾಗ ಕುಮಾರಸ್ವಾಮಿ ಈ ಯೋಜನೆಗೆ ಪ್ರಾಥಮಿಕ ಅಲೈನ್ಮೆಂಟ್ ಮಾಡಿ, ಈ ಹೆದ್ದಾರಿಗೆ ಅನುಮೋದನೆ ನೀಡಿದರು. ಕೇಂದ್ರದಲ್ಲಿ ಯಾವುದೇ ಸರ್ಕಾರ ಇದ್ದರೂ ಈ ಯೋಜನೆಗೆ ಸಹಕಾರ ಕೊಡಲೇಬೇಕು. ಆದರೆ ಪ್ರತಾಪ್ ಸಿಂಹ ಹೆಜ್ಜೆ ಹೆಜ್ಜೆಗೂ ಈ ಯೋಜನೆಯನ್ನು ನಾನೇ ಮಾಡಿದ್ದು ಎಂದು ಚೀಫ್ ಇಂಜಿನಿಯರ್ ಥರ ಆಡುತ್ತಾನೆ. ಈ ಹೆದ್ದಾರಿಯಿಂದ ಬೆಂಗಳೂರು, ಚನ್ನಪಟ್ಟಣ, ರಾಮನಗರ, ಮಂಡ್ಯ, ಶ್ರೀರಂಗಪಟ್ಟಣ ಭಾಗದ ನೂರಾರು ಕುಟುಂಬಗಳ ಬಾಯಿಗೆ ಮಣ್ಣು ಬಿದ್ದಿದೆ ಎಂದು ಟೀಕಿಸಿದರು.