ಮೈಸೂರು: ಮಹಿಳೆಯರನ್ನು ಮದುವೆಯಾಗುವುದಾಗಿ ನಂಬಿಸಿ ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದ ವ್ಯಕ್ತಿಯನ್ನು ಕುವೆಂಪು ನಗರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ. ಬಂಧಿತನನ್ನು ಬೆಂಗಳೂರಿನ ಬನಶಂಕರಿ ಬಡಾವಣೆ ನಿವಾಸಿ ಮಹೇಶ್ (35) ಎಂದು ಗುರುತಿಸಲಾಗಿದೆ. ಈತನಿಂದ 2 ಲಕ್ಷ ನಗದು, 2 ಕಾರು, ಒಂದು ಬ್ರೇಸ್ ಲೈಟ್, ಒಂದು ಉಂಗುರ, ಎರಡು ಚಿನ್ನದ ಬಳೆ, ಒಂದು ನೆಕ್ಲೆಸ್ ಹಾಗೂ 7 ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಮೈಸೂರಿನ ನಿವಾಸಿ ಹೇಮಲತಾ ಎಂಬವರಿಗೆ ತಾನು ವೈದ್ಯ ಎಂದು ಹೇಳಿ ಶಾದಿ ಡಾಟ್ ಕಾಂ ನಲ್ಲಿ ಪರಿಚಯಿಸಿಕೊಂಡಿದ್ದ. ಮದುವೆಯಾಗಿ ನಗದು ಹಾಗೂ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದ. ಹೇಮಲತಾ ಅವರು ಕುವೆಂಪುನಗರ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆಯಲ್ಲಿ ಆರೋಪಿಯು ತಾನು ವೈದ್ಯ, ಇಂಜಿನಿಯರ್, ಸಿವಿಲ್ ಕಂಟ್ರಾಕ್ಟರ್ ಎಂದೆಲ್ಲ ಸುಳ್ಳು ಹೇಳಿಕೊಂಡು ಸುಮಾರು 15 ಮಹಿಳೆಯರಿಗೆ ವಂಚಿಸಿದ್ದು ಬೆಳಕಿಗೆ ಬಂದಿದೆ.
ಶಾದಿ ಡಾಟ್ ಕಾಂ ಮೂಲಕ ಹೇಮಲತಾ ಅವರನ್ನು ಸಂಪರ್ಕಿಸಿದ್ದ ಮಹೇಶ್, ಮೈಸೂರಿನ ವಿಜಯನಗರದಲ್ಲಿರುವ ಮನೆಯನ್ನು ತನ್ನದೆಂದು ತೋರಿಸಿ ನಂಬಿಸಿದ್ದಾನೆ. ಈತನನ್ನು ನಂಬಿದ ಮಹಿಳೆ ಕಳೆದ ಜ.1ರಂದು ವಿಶಾಖಪಟ್ಟಣಂನಲ್ಲಿ ಮದುವೆಯಾಗಿದ್ದಾರೆ. ನಂತರ ಮೈಸೂರಿನ ಮನೆಗೆ ಬಂದು ನೆಲೆಸಿದ್ದರು.
ಮಹೇಶ್ ತಾನು ಕ್ಲಿನಿಕ್ ಓಪನ್ ಮಾಡಬೇಕು, 70 ಲಕ್ಷ ರೂ ನೀಡುವಂತೆ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಹಣ ಕೊಡಲು ಹೇಮಲತಾ ಒಪ್ಪದೇ ಇದ್ದಾಗ ಕೊಲೆ ಬೆದರಿಕೆ ಹಾಕಿದ್ದಾನೆ. ನಂತರ ಹೇಮಲತಾ ಮನೆಯಲ್ಲಿ ಇಲ್ಲದಿರುವ ಸಮಯ ನೋಡಿಕೊಂಡು 15 ಲಕ್ಷ ಹಣ ಹಾಗೂ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದಾನೆ. ಬಳಿಕ ಮನೆಗೆ ಹಿಂದಿರುಗಲಿಲ್ಲ.