ಮೈಸೂರು: ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಮೃತದೇಹ ಹಸ್ತಾಂತರಕ್ಕೂ ಮುನ್ನ ಬಿಲ್ ಪಾವತಿಸುವಂತೆ ಆಸ್ಪತ್ರೆ ಮಂಡಳಿ ಹೇಳಿದ್ದರಿಂದ ಸಿಟ್ಟಾದ ಕುಟುಂಬಸ್ಥರು ಆಸ್ಪತ್ರೆಗೆ ಕಲ್ಲು ತೂರಿರುವ ಘಟನೆ ಇಲ್ಲಿ ನಡೆದಿದೆ.
ಮೈಸೂರಿನ ಗೌಸಿಯಾನಗರ ನಿವಾಸಿ ವಾಜೀದ್ ಪಾಷಾ ಎಂಬುವರಿಗೆ ಒಂದು ವಾರದ ಹಿಂದೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಿಷನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ರಾತ್ರಿ ಅವರು ಮೃತಪಟ್ಟಿದ್ದಾರೆ.
ಕೊರೊನಾ ಸೋಂಕಿನಿಂದ ವ್ಯಕ್ತಿ ಸಾವು; ಸಂಬಂಧಿಕರಿಂದ ಆಸ್ಪತ್ರೆಗೆ ಕಲ್ಲು ತೂರಾಟ ಇಂದು (ಶುಕ್ರವಾರ) ಮೃತದೇಹ ಪಡೆಯಲು ಹೋದ ಕುಟುಂಬಸ್ಥರಿಗೆ ಬಿಲ್ ಪಾವತಿಸಿ ನಂತರ ಮೃತದೇಹ ತೆಗೆದುಕೊಂಡು ಹೋಗುವಂತೆ ಆಸ್ಪತ್ರೆಯವರು ಹೇಳಿದ್ದಾರೆ. ಇದರಿಂದ ರೊಚ್ಚಿಗೆದ್ದ ಕುಟುಂಬಸ್ಥರು ನಾವು ಬಡವರು, ಅಷ್ಟು ಹಣ ಎಲ್ಲಿಂದ ತರುವುದು ಎಂದು ಕಂಗಾಲಾಗಿ ಗಲಾಟೆ ಮಾಡಿದ್ದಾರೆ. ವಾದ-ವಿವಾದ ವಿಕೋಪಕ್ಕೆ ತೆರಳಿ ಮೃತನ ಕುಟುಂಬಸ್ಥರು ಹಾಗೂ ಸಂಬಂಧಿಕರು ಆಸ್ಪತ್ರೆಗೆ ಕಲ್ಲು ತೂರಾಟ ಮಾಡಿದ್ದಾರೆ ಎನ್ನಲಾಗಿದೆ. ಇದರಿಂದ ಗಾಬರಿಯಾದ ಆಸ್ಪತ್ರೆಯ ಆಡಳಿತ ಮಂಡಳಿಯವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಮಂಡಿ ಠಾಣಾ ಪೊಲೀಸರು ಮೃತನ ಕುಟುಂಬಸ್ಥರನ್ನು ಚದುರಿಸಿ ಆಸ್ಪತ್ರೆಗೆ ಭದ್ರತೆ ಒದಗಿಸಿದ್ದಾರೆ.