ಮೈಸೂರು : ಪ್ರೀತಿಸಿ ಮದುವೆಯಾದ ಜೋಡಿಯೊಂದರ ಸಂಸಾರದಲ್ಲಿ ಅನುಮಾನ ಎಂಬ ಭೂತ ಜೀವಗಳನ್ನೇ ಬಲಿಪಡೆದಿದೆ. ಗಂಡ ಹೆಂಡತಿಗೆ ಚಾಕುವಿನಿಂದ ಇರಿದು, ತಾನು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಮುತ್ತಿನ ಮುಳ್ಳುಸೋಗೆ ಗ್ರಾಮದಲ್ಲಿ ನಡೆದಿದೆ.
ಹೀಗೆ ಹೆಂಡತಿಯ ಮೇಲೆ ಅನುಮಾನದಿಂದ ಆಕೆಗೆ ಚಾಕುವಿನಿಂದ ಇರಿದು ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ಪ್ರಸನ್ನ ಎಂದು ಗುರುತಿಸಲಾಗಿದೆ. ಚಾಕು ಇರಿತಕ್ಕೆ ಒಳಗಾದವರು ಶ್ವೇತಾ ಎಂಬುದಾಗಿ ತಿಳಿದು ಬಂದಿದೆ. ಇವರಿಬ್ಬರು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಮುತ್ತಿನ ಮುಳ್ಳುಸೋಗೆ ಗ್ರಾಮದವರು. ಇವರು ಒಂದೇ ಗ್ರಾಮದವರಾಗಿದ್ದಾರೆ. ಒಂದೂವರೆ ವರ್ಷದ ಹಿಂದೆ ಪ್ರೀತಿಸಿ ಮದುವೆ ಆಗಿದ್ದರು. ಸ್ವಲ್ಪ ದಿನಗಳ ನಂತರ ಇವರಿಬ್ಬರ ಸಂಸಾರದಲ್ಲಿ ಅನುಮಾನ ಹೆಚ್ಚಾಗಿ, ಸಾಮರಸ್ಯ ಇಲ್ಲದ ಕಾರಣ ಇಬ್ಬರು ಬೇರೆ ಬೇರೆಯಾಗಿ ವಾಸಮಾಡುತ್ತಿದ್ದರು.
ಹೆಂಡತಿ ಶ್ವೇತಾ ಮೇಲೆ ಗಂಡ ಪ್ರಸನ್ನ ಸಂಶಯಪಡಲು ಪ್ರಾರಂಭಿಸಿದ್ದಾರೆ. ಇದರಿಂದ ಇಂದು ಗ್ರಾಮದಲ್ಲೇ ಹೆಂಡತಿಗೆ ಚಾಕುವಿನಿಂದ ಮನ ಬಂದಂತೆ ಇರಿದಿದ್ದಾರೆ. ನಂತರ ಅವರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೆಂಡತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಡ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಬೈಲಕುಪ್ಪೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ:ಮದ್ಯದ ಅಮಲಿನಲ್ಲಿ ಸ್ನೇಹಿತನಿಗೆ ಚಾಕು ಇರಿದು ಹತ್ಯೆ: ಆರೋಪಿ ಬಂಧನ
ಮದ್ಯದ ಅಮಲಿನಲ್ಲಿ ಸ್ನೇಹಿತನಿಗೆ ಚಾಕು ಇರಿದು ಹತ್ಯೆ (ಪ್ರತ್ಯೇಕ ಘಟನೆ) : ಮದ್ಯದ ಅಮಲಿನಲ್ಲಿ ಸ್ನೇಹಿತನನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದ ಆರೋಪಿಯನ್ನು ಕೆಂಗೇರಿ ಠಾಣೆಯ ಪೊಲೀಸರು (ನವೆಂಬರ್ 11-2023) ಬಂಧಿಸಿದ್ದರು. ಚಾಕು ಇರಿದು ನಾಟಕ ಆಡಿದ್ದ ಮಾದೇಶ್ (36) ಬಂಧಿತ ಆರೋಪಿ. ನವೆಂಬರ್ 5ರಂದು ರಾಜಕುಮಾರ್ ಎಂಬ ಸ್ನೇಹಿತನಿಗೆ ಆರೋಪಿ ಚಾಕು ಇರಿದು ಹತ್ಯೆ ಮಾಡಿದ್ದ.
ಮೃತ ರಾಜಕುಮಾರ್ ಹಾಗೂ ಮಾದೇಶ್ ಸ್ನೇಹಿತರಾಗಿದ್ದರು. ಇಬ್ಬರೂ ಸಹ ಕ್ಯಾಬ್ ಚಾಲಕರಾಗಿದ್ದವರು. ನವೆಂಬರ್ 5 ರಂದು ಮದ್ಯ ಖರೀದಿಸಿ ಇಬ್ಬರೂ ಸಹ ಕೆಂಗೇರಿಯ ನಿರ್ಜನ ಪ್ರದೇಶಕ್ಕೆ ತೆರಳಿ ಮದ್ಯ ಸೇವನೆ ಮಾಡಿದ್ದರು. ಈ ವೇಳೆ, ಮಾದೇಶನ ಪತ್ನಿ ಹಾಗೂ ಮಗಳ ಬಗ್ಗೆ ರಾಜಕುಮಾರ್ ನಿಂದಿಸಿ ಮಾತನಾಡಿದ್ದರು.
ಆ ಸಂದರ್ಭದಲ್ಲಿ ಕೋಪಗೊಂಡ ಮಾದೇಶ ತನ್ನ ಕಾರ್ನಲ್ಲಿದ್ದ ಚಾಕುವಿನಿಂದ ರಾಜಕುಮಾರ್ನ ಎದೆ ಭಾಗಕ್ಕೆ ಇರಿದಿದ್ದ. ಬಳಿಕ ಗಾಬರಿಯಿಂದ ತಾನೇ ಆಸ್ಪತ್ರೆಗೆ ಕರೆದೊಯ್ದಿದ್ದ. ನಂತರ ಆತನ ಸಂಬಂಧಿಕರಿಗೆ ಕರೆ ಮಾಡಿ ಯಾರೋ ಅಪರಿಚಿತರು ಚಾಕು ಇರಿದಿದ್ದಾರೆ ಎಂದು ನಾಟಕ ಆಡಿದ್ದ. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದ ಪರಿಣಾಮ ರಾಜಕುಮಾರ್ ಮೃತಪಟ್ಟಿದ್ದರು. ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆರೋಪಿ ಸ್ಥಳದಿಂದ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮಾದೇಶನನ್ನು ವಶಕ್ಕೆ ಪಡೆದು ವಿಚಾರಿಸಿದ ವೇಳೆ ಅಸಲಿ ಸಂಗತಿ ಗೊತ್ತಾಯಿತು ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್ ಗಿರೀಶ್ ತಿಳಿಸಿದ್ದರು.