ಮೈಸೂರು:ನಿವೇಶನ ಖಾತೆ ವರ್ಗಾವಣೆಯಾಗಿಲ್ಲ ಎಂಬ ಬೇಸರದಲ್ಲಿದ್ದ ವ್ಯಕ್ತಿಯೊಬ್ಬ ಮಾಜಿ ಚೇರ್ಮನ್ನನ್ನು ಬಾಯಿಗೆ ಬಂದಂತೆ ಬೈದಿದ್ದಾರೆ. ಈ ವಿಷಯ ತಿಳಿದ ಮಾಜಿ ಚೇರ್ಮನ್ ಅಣ್ಣನ ಮಗ ಆ ವ್ಯಕ್ತಿಯನ್ನ ದೊಣ್ಣೆಯಿಂದ ತಲೆಗೆ ಹೊಡೆದು ಹತ್ಯೆ ಮಾಡಿರುವ ಘಟನೆ ತಿ.ನರಸೀಪುರ ತಾಲೂಕಿನ ವ್ಯಾಸರಾಜಪುರ ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟ ಚಿನ್ನಸ್ವಾಮಿ ವ್ಯಾಸರಾಜಪುರ ಗ್ರಾಮದ ದಿವಂಗತ ಮನಸಿದ್ದ ನಾಯಕ ಮತ್ತು ಚಿಕ್ಕಣ್ಣಮ್ಮ ದಂಪತಿಯ ಮಗನಾಗಿದ್ದು, ಈತನನ್ನು ಮಾಜಿ ಚೇರ್ಮನ್ ನಾಗರಾಜು ಎಂಬುವವರ ಅಣ್ಣನ ಮಗ ಪ್ರತಾಪ್ ಎಂಬಾತನೇ ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ.
ಘಟನೆಯ ವಿವರ:ಮನಸಿದ್ದ ನಾಯಕ ಮತ್ತು ಚಿಕ್ಕಣ್ಣಮ್ಮ ದಂಪತಿಗೆ 6 ಮಕ್ಕಳು. ಅವರಲ್ಲಿ 3 ಜನ ಮಕ್ಕಳು ಈಗಾಗಲೇ ಮೃತಪಟ್ಟಿದ್ದಾರೆ. 2 ಹೆಣ್ಣು ಮಕ್ಕಳಿಗೆ ಮದುವೆಯಾಗಿದ್ದು, ತಾಯಿ ಚಿಕ್ಕಣ್ಣಮ್ಮ ಮಗನಾದ ಚಿನ್ನಸ್ವಾಮಿ ಜೊತೆ ವಾಸವಾಗಿದ್ದಾರೆ.
ಪತಿ ಮನಸಿದ್ದ ನಾಯಕನ ಹೆಸರಿನಲ್ಲಿ ಇದ್ದ ನಿವೇಶನವನ್ನು ಮಾರಾಟ ಮಾಡಲು ನಿರ್ಧರಿಸಿ ಚಿಕ್ಕಣ್ಣಮ್ಮ, ಅದೇ ಗ್ರಾಮದ ರತ್ನಮ್ಮ ಎಂಬುವವರಿಗೆ 1.80 ಲಕ್ಷಕ್ಕೆ ಮಾರಾಟ ಮಾಡಲು ಕರಾರು ಮಾಡಿಕೊಂಡಿದ್ದರು.
ಕರಾರು ಹಿನ್ನೆಲೆ 70 ಸಾವಿರ ಮುಂಗಡ ಹಣವೂ ಪಡೆದಿದ್ದಾರೆ. ಪತಿ ಹೆಸರಿನಲ್ಲಿ ಇದ್ದ ಖಾತೆಯನ್ನು ತನ್ನ ಹೆಸರಿಗೆ ವರ್ಗಾವಣೆ ಮಾಡಬೇಕಾಗಿತ್ತು. ಹೀಗಾಗಿ ತನ್ನ ಹೆಸರಿಗೆ ಪೌತಿ ಖಾತೆ ಮಾಡಿಕೊಡುವಂತೆ ಮಾಜಿ ಚೇರ್ಮನ್ ನಾಗರಾಜು ಎಂಬುವವರಿಗೆ 10 ಸಾವಿರ ನೀಡಿದ್ದೇನೆ ಎಂದು ಚಿಕ್ಕಣ್ಣಮ್ಮ ಪೊಲೀಸರಿಗೆ ದೂರು ನೀಡಿದ್ದಾರೆ.
ಹಣ ನೀಡಿದ್ರೂ ಖಾತೆ ವರ್ಗಾವಣೆ ಆಗದಿದ್ದಕ್ಕೆ ಬೇಸರಗೊಂಡ ಚಿನ್ನಸ್ವಾಮಿ ಮನೆಯ ಮುಂದೆ ಕುಳಿತ್ತಿದ್ದ ತಾಯಿಯನ್ನು ತರಾಟೆಗೆ ತೆಗೆದುಕೊಂಡು, ಹಣ ಪಡೆದು ಖಾತೆ ಮಾಡಿಕೊಡದ ಮಾಜಿ ಚೇರ್ಮನ್ ನಾಗರಾಜುನನ್ನು ಬೈಯ್ದಿದ್ದಾನೆ.
ಇದೇ ಸಂದರ್ಭದಲ್ಲಿ ಅಲ್ಲಿಗೆ ಬಂದ ಚೇರ್ಮನ್ ಅಣ್ಣನ ಮಗ ಪ್ರತಾಪ್ ಎಂಬಾತ ನನ್ನ ಚಿಕ್ಕಪ್ಪನನ್ನ ಬಾಯಿಗೆ ಬಂದಂತೆ ಬೈಯುತ್ತಿಯಾ ಎಂದು ದೊಣ್ಣೆಯಿಂದ ತಲೆಗೆ ಹೊಡೆದು ಮುಂದಿನ ಮನೆಯಲ್ಲಿ ಮಲಗಿಸಿ ಹೋಗಿದ್ದಾನೆ ಎಂದು ಪೊಲೀಸರಿಗೆ ಚಿಕ್ಕಣ್ಣಮ್ಮ ದೂರು ನೀಡಿದ್ದಾರೆ.
ಪ್ರಜ್ಞೆ ತಪ್ಪಿ ಬಿದ್ದಿದ್ದ ಚಿನ್ನಸ್ವಾಮಿಯನ್ನು ಮಾರನೇ ದಿನ ಚಿಕ್ಕಣ್ಣಮ್ಮನ ಮೊಮ್ಮಗ ರವಿನಾಯಕ ತಿ.ನರಸೀಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕಳುಹಿಸಿದ್ದಾರೆ. ಇಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಚಿನ್ನಸ್ವಾಮಿ ಮೃತಪಟ್ಟಿದ್ದಾರೆ. ಈ ಸಂಬಂಧ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲಿಸರು ತನಿಖೆ ಕೈಗೊಂಡಿದ್ದಾರೆ.