ಮೈಸೂರು:ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲು ಮಾವುತ ಹಾಗೂ ಕಾವಾಡಿಗಳು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು ಹಾಗೂ ವೈದ್ಯರು ಅವರ ಮನವೊಲಿಸಿದರು.
ಮಾವುತ-ಕಾವಾಡಿಗಳಿಂದ ಕೋವಿಡ್ ಟೆಸ್ಟ್ಗೆ ವಿರೋಧ: ಮನವೊಲಿಸಿದ ಅಧಿಕಾರಿಗಳು! - ಕಾವಾಡಿಗಳಿಗೆ ಕೊರೊನಾ ಟೆಸ್ಟ್
ಕೊರೊನಾ ರುದ್ರ ತಾಂಡವವಾಡುತ್ತಿರುವುದರಿಂದ ದಸರಾ ಹಿನ್ನೆಲೆ ಮೈಸೂರಿಗೆ ಆಗಮಿಸಿರುವ ಮಾವುತರು ಹಾಗೂ ಕಾವಾಡಿಗಳಿಗೆ ಕೋವಿಡ್ ಟೆಸ್ಟ್ ಮಾಡಿಸಲು ಮುಂದಾದಾಗ ಅವರು ವಿರೋಧ ವ್ಯಕ್ತಪಡಿಸಿರುವ ಘಟನೆ ನಡೆದಿದೆ.
ಅರಮನೆಯಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬ ನೌಕರನಿಗೂ ಕೊರೊನಾ ಪರೀಕ್ಷೆ ಮಾಡಲು ನಿರ್ಧರಿಸಲಾಗಿದೆ. ಅದರಂತೆ ಗಜಪಡೆಯ ಮಾವುತ ಹಾಗೂ ಕಾವಾಡಿಗಳಿಗೆ ಇಂದು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲು ಸಮಯ ನಿಗದಿ ಮಾಡಲಾಗಿತ್ತು. ಆದರೆ ನಮಗ್ಯಾಕೆ ಕೊರೊನಾ ಪರೀಕ್ಷೆ? ನಾವು ಕಾಡಿನಿಂದ ಬಂದವರು. ನಮಗೆ ಯಾವುದೇ ಕೊರೊನಾ ಬರುವುದಿಲ್ಲ, ಟೆಸ್ಟ್ ಬೇಡ ಎಂದು ಪಟ್ಟು ಹಿಡಿದರು.
ಈ ವಿಷಯ ತಿಳಿದ ಡಿಸಿಎಫ್ ಅಲೆಗ್ಸಾಂಡರ್ ಹಾಗೂ ಪಶುವೈದ್ಯ ಡಾ. ನಾಗರಾಜ್, ಮಾವುತ ಹಾಗೂ ಕಾವಾಡಿಗಳಿಗೆ ಕೋವಿಡ್ ಕುರಿತು ಮಾಹಿತಿ ನೀಡಿ, ಪರಿಸ್ಥಿತಿ ಬಗ್ಗೆ ವಿವರಿಸಿದಾಗ ಪರೀಕ್ಷೆ ಮಾಡಿಸಿಕೊಳ್ಳಲು ಒಪ್ಪಿದ್ದಾರೆ.