ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಮೈಸೂರು :ಮಹಿಷಾ ದಸರಾ ಹೆಸರನ್ನು ಮುಂದಿನ ದಿನಗಳಲ್ಲಿ ಬದಲಾಯಿಸುವ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಅವರು ಹೇಳಿದರು. ರಾಮಕೃಷ್ಣನಗರದಲ್ಲಿರುವ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಹಿಷಾ ದಸರಾ ಆಚರಣೆ ಕುರಿತು ಚರ್ಚಿಸಿದರು. ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೇರೆ ವಿಚಾರಕ್ಕೆ ಭೇಟಿ ಮಾಡಿದ್ದೇನೆ ಎಂದರು.
ಮಹಿಷಾ ದಸರಾಗೆ 50 ವರ್ಷ ಹಿನ್ನೆಲೆ ಸಮರ್ಥಿಸಿಕೊಂಡ ಸ್ವಾಮೀಜಿ, ಮಂಟೇಲಿಂಗಯ್ಯ 1974 ರಲ್ಲೇ ಮಹಿಷನಿಗೆ ಪೂಜೆ ಸಲ್ಲಿಸಿ ಮಹಿಷಾ ದಸರಾ ಪ್ರಾರಂಭಿಸಿದ್ದರು. ಸರ್ಕಾರಕ್ಕೂ ಮಹಿಷಾ ದಸರೆಗೂ ಸಂಬಂಧವಿಲ್ಲ. ಇದನ್ನು ಸರ್ಕಾರಕ್ಕೆ ಟ್ಯಾಗ್ ಮಾಡಬೇಡಿ ಎಂದು ಮನವಿ ಮಾಡಿದರು.
ಚಾಮುಂಡಿ ಬೆಟ್ಟವನ್ನು ಮಹಿಷ ಬೆಟ್ಟ ಅಂತಾ ಹಾಕಿರುವುದು ತಪ್ಪು. ಇದನ್ನು ಸರಿಪಡಿಸಲು ಸೂಚಿಸುತ್ತೇನೆ. ನಾವು ದಸರಾಗೆ ಪರ್ಯಾಯವಾಗಿ ಮಹಿಷಾ ದಸರಾ ಮಾಡುತ್ತಿಲ್ಲ. ಚಾಮುಂಡೇಶ್ವರಿಯನ್ನು ನೆನೆದು ನಾವು ಮಹಿಷಾ ದಸರಾ ಮಾಡುತ್ತೇವೆ. ಯಾರಿಗೂ ನೋವನ್ನುಂಟು ಮಾಡುವುದು ನಮ್ಮ ಉದ್ದೇಶವಲ್ಲ ಎಂದು ಸ್ಪಷ್ಟಪಡಿಸಿದರು.
ರೈತ ದಸರಾ, ಮಹಿಳಾ ದಸರಾ ರೀತಿ ನಾವು ಮಹಿಷಾ ದಸರಾ ಮಾಡುತ್ತೇವೆ. ಇದನ್ನು 10 ದಿನಗಳ ಕಾಲ ಆಚರಿಸುವುದಿಲ್ಲ. ಹೀಗಾಗಿ ಮಹಿಷಾ ಮಹೋತ್ಸವ, ಮಹಿಷಾ ದಿನಾಚರಣೆ ಅಥವಾ ಮಹಿಷಾ ಸಮಾವೇಶ ಹೆಸರಿನಲ್ಲಿ ಇದನ್ನು ಆಚರಿಸುತ್ತೇವೆ. ಬೇರೆ ಸಮಯದಲ್ಲಿ ಆಚರಿಸಲು ಚಿಂತನೆ ನಡೆಸುತ್ತೇವೆ ಎಂದು ಹೇಳಿದರು. ಮಹಿಷಾ ದಸರಾ ಆಚರಣೆ ವಿಚಾರವಾಗಿ ನ್ಯಾಯಾಲಯದ ಮೊರೆ ಹೋಗಿರುವುದು ಸಂತೋಷ. ನ್ಯಾಯಾಲಯದ ತೀರ್ಪನ್ನು ಗೌರವಿಸುತ್ತೇವೆ. ನ್ಯಾಯಾಲಯಕ್ಕೆ ದಾಖಲೆಗಳನ್ನು ನೀಡುತ್ತೇವೆ ಎಂದು ಸ್ವಾಮೀಜಿ ತಿಳಿಸಿದರು.
ಮಹಿಷಾ ದಸರಾ ಮಾಡುತ್ತೇವೆ :"ಮಹಿಷಾ ದಸರಾ ಆಚರಣೆಗೆ ಯಾರದೇ ಅನುಮತಿ ಬೇಕಿಲ್ಲ. ಸಂವಿಧಾನದಲ್ಲಿ ಧಾರ್ಮಿಕ ಆಚರಣೆಗೆ ಅವಕಾಶವಿದೆ. ಅದರಂತೆ ಮಹಿಷಾ ದಸರಾಚರಣೆ ಮಾಡುತ್ತೇವೆ. ರಕ್ಷಣೆಯ ದೃಷ್ಟಿಯಿಂದ ಜಿಲ್ಲಾಡಳಿತ, ನಗರ ಪೊಲೀಸ್ ಕಮಿಷನರ್ ಹಾಗೂ ಪಾಲಿಕೆಗೆ ಮನವಿ ಪತ್ರ ಸಲ್ಲಿಸಲಾಗಿದೆ" ಎಂದು ಮಹಿಷಾ ದಸರಾ ಸಮಿತಿಯ ಅಧ್ಯಕ್ಷ ಹಾಗು ಮಾಜಿ ಮೇಯರ್ ಪುರುಷೋತ್ತಮ್ ಈಟಿವಿ ಭಾರತ್‌ಗೆ ನೀಡಿದ ಸಂದರ್ಶನದಲ್ಲಿ ( ಅಕ್ಟೋಬರ್- 6-2023) ತಿಳಿಸಿದ್ದರು.
"ಅಕ್ಟೋಬರ್ 13 ರ ಬೆಳಗ್ಗೆ 9 ಗಂಟೆಗೆ 1 ಸಾವಿರ ಸ್ಕೂಟರ್ ಮೂಲಕ ರ‍್ಯಾಲಿಯಲ್ಲಿ ತೆರಳಿ ಚಾಮುಂಡಿ ಬೆಟ್ಟದಲ್ಲಿರುವ ಮಹಿಷಾ ಮೂರ್ತಿಗೆ ಪುಷ್ಪಾರ್ಚನೆ ಮಾಡಲಾಗುತ್ತದೆ. ಆ ನಂತರ ಬೆಟ್ಟದ ಕೆಳಭಾಗದ ತಾವರೆಕಟ್ಟೆ ಬಳಿ ಮಹಿಷಾಸುರನ ಎರಡು ಟ್ಯಾಬ್ಲೋ, ರಥ ಹಾಗೂ ಸಮಾಜ ಸುಧಾರಕರಾದ ಕುವೆಂಪು, ವಾಲ್ಮಿಕಿ, ಮೈಸೂರು ಒಡೆಯರ್ ಸೇರಿದಂತೆ ಇತರ ಮಹಾನುಭಾವರ ಭಾವಚಿತ್ರಗಳನ್ನು ಮಹಿಷಾ ರಥದಲ್ಲಿರಿಸಿಕೊಂಡು, ಸಾಂಸ್ಕೃತಿಕ ಕಲಾತಂಡಗಳೊಂದಿಗೆ ನಗರದ ಟೌನ್‌ಹಾಲ್‌ವರೆಗೆ ಮೆರವಣಿಗೆ ನಡೆಸಲಾಗುತ್ತದೆ. ಟೌನ್‌ಹಾಲ್‌ನಲ್ಲಿ ಸುಮಾರು 10 ಸಾವಿರ ಜನ ಸೇರುವ ನಿರೀಕ್ಷೆ ಇದೆ" ಎಂದು ಹೇಳಿದ್ದರು.
ಇದನ್ನೂ ಓದಿ :'ಸಂವಿಧಾನದಲ್ಲಿ ಧಾರ್ಮಿಕ ಆಚರಣೆಗೆ ಅವಕಾಶವಿದೆ, ಅದರಂತೆ ಮಹಿಷ ದಸರಾ ಮಾಡುತ್ತೇವೆ'