ಮೈಸೂರು: ಚಾಮುಂಡಿ ಬೆಟ್ಟದಲ್ಲಿರುವ ಮಹಿಷಾಸುರನ ಪ್ರತಿಮೆಗೆ ಅಕ್ಟೋಬರ್ 13ರಂದು ಪುಷ್ಪಾರ್ಚನೆ ಮಾಡುವ ಮೂಲಕ ಮಹಿಷಾ ದಸರಾ ಆಚರಣೆ ಮಾಡಲಾಗುವುದು. ಇದಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ ಎಂದು ಮಹಿಷಾ ದಸರಾ ಆಚರಣೆ ಸಮಿತಿಯ ಸದಸ್ಯ ಹಾಗೂ ಮಾಜಿ ಮೇಯರ್ ಪುರುಷೋತ್ತಮ್ ತಿಳಿಸಿದರು.
ಇಂದು ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹಿಷಾ ದಸರಾವನ್ನು ಅಕ್ಟೋಬರ್ 13ರಂದು ಚಾಮುಂಡಿ ಬೆಟ್ಟದಲ್ಲಿ ಆಚರಿಸಲಾಗುತ್ತದೆ. ಈ ವೇಳೆ ಮಹಿಷಾಸುರನಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಮಹಿಷಾ ದಸರಾಕ್ಕೆ ಚಾಲನೆ ನೀಡಲಾಗುವುದು. ಚಾಮುಂಡಿ ಬೆಟ್ಟದಲ್ಲಿ ಸ್ಥಳಾವಕಾಶದ ಕೊರತೆ ಇರುವುದರಿಂದ ವೇದಿಕೆ ಕಾರ್ಯಕ್ರಮವನ್ನು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಆಯೋಜನೆ ಮಾಡಲಾಗುವುದು. ವೇದಿಕೆ ಕಾರ್ಯಕ್ರಮಕ್ಕೆ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಸೇರಿದಂತೆ ಬೇರೆ ಬೇರೆ ಕಡೆಗಳಿಂದ 5 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ. ಈ ಬಾರಿ ಮಹಿಷಾ ದಸರಾ ಆಚರಣೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದ್ದು, ಪೊಲೀಸ್ ಇಲಾಖೆಯೂ ಸಹಕಾರ ಕೊಡುವ ನಿರೀಕ್ಷೆ ಇದೆ. ನಾಡಹಬ್ಬ ದಸರಾ ಆಚರಣೆಗೂ ಎರಡು ದಿನ ಮುನ್ನ ಮಹಿಷಾ ದಸರಾ ಆಚರಿಸಲಾಗುವುದು. ಮಹಿಷಾ ದಸರಾಗೂ ನಾಡಹಬ್ಬ ದಸರಾಗೂ ಯಾವುದೇ ಸಂಬಂಧ ಇಲ್ಲ ಎಂದು ಇದೇ ವೇಳೆ ತಿಳಿಸಿದರು.