ಮೈಸೂರು : ಮಹಿಷ ಹಾಗೂ ಚಾಮುಂಡೇಶ್ವರಿ ಒಂದೇ ಕಾಲದಲ್ಲಿ ಹುಟ್ಟಿದವರಲ್ಲ. ಅವರು ಒಬ್ಬರನ್ನೊಬ್ಬರು ಭೇಟಿಯಾಗಿರಲು ಸಾಧ್ಯವೇ ಇಲ್ಲ ಎಂದು ಪ್ರಗತಿಪರ ಚಿಂತಕ ಪ್ರೊ ಮಹೇಶ್ ಚಂದ್ರ ಗುರು ಹೇಳಿಕೆ ನೀಡಿದ್ದಾರೆ.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಇಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಅಸುರರೆಂದರೆ ಕೊಲ್ಲುವವರಲ್ಲ, ರಕ್ಷಿಸುವವರು. ರಕ್ಕಸರೆಂದು ಯಾರೋ ಬರೆದುದನ್ನು ಏಕೆ ಈಗಲೂ ಅನುಸರಿಸಬೇಕು. ನೈಜ ಇತಿಹಾಸವನ್ನು ಜನ ತಿಳಿಯಬೇಕು ಎಂದರು. ದಸರಾ ವೇಳೆ ಚಾಮುಂಡೇಶ್ವರಿ ಫೋಟೋ ಇರಿಸುವುದು ಜಾತ್ಯತೀತ ನಿಲುವಿಗೆ ವಿರುದ್ಧವಾದುದಾಗಿದೆ. ರಾಜ್ಯ ಸರ್ಕಾರಕ್ಕೆ ಬದ್ಧತೆ ಇದ್ದರೆ ಸರ್ವ ಧರ್ಮಗಳಿಗೆ ಸೇರಿದವರ ಭಾವಚಿತ್ರ ಇರಿಸಲಿ. ಮಹಿಷ ಸತ್ಯ, ಚಾಮುಂಡಿ ಮಿಥ್ಯಾ ಎಂಬುದನ್ನು ಜನ ತಿಳಿಯಬೇಕು. ನಾವು ಮಹಿಷ ದಸರಾ ಮಾಡುವುದರಿಂದ ವಿರೋಧಿಗಳಿಗೆ ಯಾಕೆ ಹೊಟ್ಟೆನೋವು ಎಂದು ಪ್ರಶ್ನಿಸಿದರು.
ಇದೇ ವೇಳೆ ಪ್ರೊ. ಕೆ ಎಸ್ ಭಗವಾನ್ ಮಾತನಾಡಿ, ಮಹಿಷ ಒಂದು ವೇಳೆ ಕೆಟ್ಟ ವ್ಯಕ್ತಿಯಾಗಿದ್ದರೆ, ಈ ನಗರಕ್ಕೆ ಏಕೆ ಆತನ ಹೆಸರು ಇರಿಸುತ್ತಿದ್ದರೆಂದು ಪ್ರಶ್ನಿಸಿದರು. ಕ್ರಿ. ಪೂ. 3ನೇ ಶತಮಾನದಲ್ಲಿ ಸಾಮ್ರಾಟ ಅಶೋಕನು ಬೌದ್ಧ ಧರ್ಮವನ್ನು ಸ್ವೀಕಾರ ಮಾಡಿದ್ದನು. ಬೌದ್ಧ ಅತ್ಯಂತ ಶ್ರೇಷ್ಠವಾದ ಧರ್ಮ ಎಂದು ಪ್ರಪಂಚದ ಜ್ಞಾನಿಗಳೆಲ್ಲಾ ಹೇಳಿದ್ದಾರೆ ಎಂದರು.
ವೈಜ್ಞಾನಿಕ ಧರ್ಮ ಮತ್ತೊಂದಿಲ್ಲ: ವಿಜ್ಞಾನಿ ಐನ್ಸ್ಟೀನ್ ತನಗೆ ಯಾವುದೇ ಧರ್ಮ ಬೇಕಿಲ್ಲ ಎಂದಿದ್ದರು. ಒಂದು ವೇಳೆ ನನಗೆ ಯಾವುದಾದರು ಧರ್ಮ ಬೇಕಿದ್ದರೆ ಬೌದ್ಧ ಧರ್ಮವನ್ನು ಸ್ವೀಕರಿಸುವುದಾಗಿ ಹೇಳಿದ್ದರು. ಕಾರಣ ಅದರಷ್ಟು ವೈಜ್ಞಾನಿಕ ಧರ್ಮ ಮತ್ತೊಂದಿಲ್ಲ ಎಂಬ ಕಾರಣಕ್ಕೆ ಹಾಗೆ ಹೇಳಿದ್ದಾರೆ. ಸ್ವತಃ ಸ್ವಾಮಿ ವಿವೇಕಾನಂದರೆ ಅಮೆರಿಕದ ಶಿಕಾಗೋದಲ್ಲಿ ನಡೆದ ವಿಶ್ವ ಸರ್ವಧರ್ಮ ಸಮ್ಮೇಳನದಲ್ಲಿ ಬುದ್ಧ ಅತ್ಯಂತ ಮಹಾನ್ ವ್ಯಕ್ತಿ ಎಂದು ಬಣ್ಣಿಸಿದ್ದರು ಎಂದು ಪ್ರೊ. ಭಗವಾನ್ ತಿಳಿಸಿದರು.