ಮೈಸೂರು :ಕಾರ್ತಿಕ ಮಾಸದ ಪ್ರಯುಕ್ತ ಚಾಮುಂಡಿಬೆಟ್ಟದಲ್ಲಿನ ನಂದಿ ವಿಗ್ರಹಕ್ಕೆ ವಿಜೃಂಭಣೆಯಿಂದ ಮಹಾಭಿಷೇಕ ಭಾನುವಾರ ನಡೆಯಿತು. ಮೈಸೂರಿನ ಬೆಟ್ಟದ ಬಳಗ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಕೂಡ ಮಹಾಭಿಷೇಕ ಹಾಗೂ ಪೂಜಾ ಮಹೋತ್ಸವ ನಡೆಸಲಾಗಿದ್ದು, 18ನೇ ವರ್ಷದ ಮಹಾಭಿಷೇಕ ಕಾರ್ಯಕ್ರಮ ನೂರಾರು ಭಕ್ತಾಧಿಗಳ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ನೆರವೇರಿತು.
ಮಹಾಭಿಷೇಕ ಕಾರ್ಯಕ್ರಮದ ಪ್ರಯುಕ್ತ ನಂದಿ ವಿಗ್ರಹಕ್ಕೆ ಮುಂಜಾನೆಯಿಂದಲೇ ವಿವಿಧ ಪೂಜೆ ಸಲ್ಲಿಸಲಾಯಿತು. ಬಳಿಕ ನಡೆದ ಮಹಾಭಿಷೇಕ ಕಾರ್ಯಕ್ರಮಕ್ಕೆ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ಹೊಸಮಠದ ಚಿದಾನಂದ ಸ್ವಾಮೀಜಿ ವಿದ್ಯುಕ್ತ ಚಾಲನೆ ನೀಡಿದರು.
ವಿವಿಧ ದ್ರವ್ಯಗಳ ಅಭಿಷೇಕ :ಮಹಾಭಿಷೇಕ ಹಾಗೂ ಪೂಜಾ ಮಹೋತ್ಸವದ ಅಂಗವಾಗಿ ಬೃಹತ್ ನಂದಿ ವಿಗ್ರಹಕ್ಕೆ ಕನಕಾಭಿಷೇಕ, ರುದ್ರಾಭಿಷೇಕದ ಜತೆಗೆ 36 ಬಗೆಯ ದ್ರವ್ಯಗಳಿಂದ ಅಭಿಷೇಕ ನೆರವೇರಿಸಲಾಯಿತು. ಪ್ರಮುಖವಾಗಿ ಕ್ಷೀರಾಭಿಷೇಕ, ಗಂಧಾಭಿಷೇಕ, ಕುಂಕುಮಾಭಿಷೇಕ, ಅರಿಶಿನ ಅಭಿಷೇಕ ಸೇರಿದಂತೆ ವಿವಿಧ ಬಗೆಯ ಹಣ್ಣು, ಹಾಲು, ಚಂದನ, ಶ್ರೀಗಂಧ, ಬಿಲ್ವಪತ್ರೆ, ಖರ್ಜೂರ, ಕೊಬ್ಬರಿ ಅಭಿಷೇಕ ನೆರವೇರಿಸಲಾಯಿತು. ನಂತರ ಕೊನೆಯಲ್ಲಿ ಜಲಾಭಿಷೇಕದೊಡನೆ ಮಹಾಭಿಷೇಕವನ್ನು ಸಮಾಪ್ತಿಗೊಳಿಸಲಾಯಿತು. ಈ ಎಲ್ಲಾ ಅಭಿಷೇಕಗಳು ಹಾಗೂ ಪೂಜಾ ಕೈಂಕರ್ಯಗಳು, ಮಹಾಮಂಗಳಾರತಿ ನೆರವೇರಿದ ಬಳಿಕ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.