ಮೈಸೂರು : ಮಳೆಗಾಲದಲ್ಲಿ ವಿವಿಧ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರೂ ಕಾಯಿಲೆಗೆ ತುತ್ತಾಗುತ್ತಾರೆ. ಈ ನಡುವೆ ಮದ್ರಾಸ್ ಐ (ಕಣ್ಣಿನ ಬಾಧೆ) ಸೋಂಕು ಶುರುವಾಗಿದ್ದು, ಮುಖ್ಯವಾಗಿ ಇದು ಮಕ್ಕಳನ್ನು ಬಾಧಿಸುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನೇತ್ರ ತಜ್ಞ ಡಾಕ್ಟರ್ ಕೆ ವಿ ರಾಜೇಶ್ ಅವರು, ಈ ಸೋಂಕಿನ ಬಗ್ಗೆ ಜನರು ಭಯ ಪಡಬೇಕಿಲ್ಲ. ಸ್ವಚ್ಛತಾ ಹಾಗೂ ಮುನ್ನೆಚ್ಚರಿಕೆ ಕ್ರಮಗಳಿಂದ ಸೋಕು ತಗುಲದಂತೆ ತಡೆಯಬಹುದು ಹೇಳಿದ್ದಾರೆ. ಮದ್ರಾಸ್ ಐನ ಗುಣಲಕ್ಷಣಗಳು, ಯಾವ ರೀತಿ ಮುನ್ನೆಚ್ಚರಿಕಾ ಕ್ರಮ ವಹಿಸಬೇಕು ಎಂಬ ಬಗ್ಗೆ ಇದೇ ವೇಳೆ ಅವರು ಮಾಹಿತಿ ನೀಡಿದ್ದಾರೆ.
ಮಳೆಗಾಲದ ಸಂದರ್ಭದಲ್ಲಿ ಜನರನ್ನು ಹೆಚ್ಚಾಗಿ ಬಾಧಿಸುವ ರೋಗಗಳಲ್ಲಿ ಮದ್ರಾಸ್ ಐ ಕೂಡ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಸೋಂಕು ಹೆಚ್ಚಾಗಿದ್ದು, ಇದು ಗಂಭೀರ ವಿಷಯ ಎಂದು ಹೇಳಿದರು.
ಸೋಂಕು ಹರಡುವ ರೀತಿ ಮತ್ತು ಲಕ್ಷಣಗಳು: ಈ ಮದ್ರಾಸ್ ಐ (ಕೆಂಪು ಕಣ್ಣು), ಸೋಂಕು ಹೊಂದಿರುವವರ ಕಣ್ಣನ್ನು ನೋಡಿದರೆ ಹರಡುವುದಿಲ್ಲ. ಹಲವು ಜನರು ಸೋಂಕು ಇರುವವರನ್ನು ನೋಡಿದರೆ ಅದು ಹರಡುತ್ತದೆ ಎಂದುಕೊಂಡಿರುತ್ತಾರೆ. ಆದರೆ ಇದು ತಪ್ಪು ಕಲ್ಪನೆ. ಈ ಸೋಂಕು ಕಾಯಿಲೆ ಇರುವವರ ಜೊತೆ ಹಸ್ತಲಾಘವ, ಆಲಂಗಿಸುವುದರ ಮೂಲಕ ಹರಡುತ್ತದೆ. ಈ ಸೋಂಕು ಇರುವವರು ಮುಟ್ಟಿದ ಯಾವುದೇ ವಸ್ತುಗಳನ್ನು ಮುಟ್ಟಿದರೂ ಈ ಸೋಂಕು ಹರಡುತ್ತದೆ. ಉದಾಹರಣೆಗೆ ಸೋಂಕು ಇರುವ ವ್ಯಕ್ತಿ ಬಳಸಿದ ಕರ್ಚಿಫ್, ಟವೆಲ್, ಇನ್ನಿತರ ವಸ್ತುಗಳನ್ನು ಮುಟ್ಟುವುದರಿಂದ ರೋಗ ಹರಡಬಹುದು. ರೋಗ ಲಕ್ಷಣಗಳೆಂದರೆ ಕಣ್ಣು ಕೆಂಪಾಗುವುದು, ಕಣ್ಣಿನಲ್ಲಿ ನೀರು ಬರುವುದು, ಕಣ್ಣಿನಲ್ಲಿ ಜಿಬ್ರೆ ಬರುವುದು. ಕಣ್ಣಿನಲ್ಲಿ ತುರಿಕೆ ಉಂಟಾಗುವುದು ಇತ್ಯಾದಿ.