ಮೈಸೂರು:ಮಧ್ಯಪ್ರದೇಶದ ಸಿಎಂ ಕುಟುಂಬ ಸಮೇತರಾಗಿ ಮೇಲುಕೋಟೆ ಚಲುವನಾರಾಯಣ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿ ಹರಕೆ ತೀರಿಸಿದರು.
ಮೇಲುಕೋಟೆ ಚಲುವನಾರಾಯಣ ಸ್ವಾಮಿ ದೇವಸ್ಥಾನಕ್ಕೆ ಮಧ್ಯಪ್ರದೇಶ ಸಿಎಂ ಭೇಟಿ
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಕುಟುಂಬ ಸಮೇತರಾಗಿ ಮಂಡ್ಯ ಜಿಲ್ಲೆಯ ಮೇಲುಕೋಟೆ ಚಲುವನಾರಾಯಣ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಹರಕೆ ತೀರಿಸಿದರು.
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಕುಟುಂಬ ಸಮೇತರಾಗಿ ಮಂಡ್ಯ ಜಿಲ್ಲೆಯ ಮೇಲುಕೋಟೆಗೆ ಹೋಗಲು ಮೈಸೂರು ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ ಬಂದಿಳಿದರು. ಅವರಿಗೆ ವಿಮಾನ ನಿಲ್ದಾಣದಲ್ಲಿ ಗಾರ್ಡ್ ಆಫ್ ಹಾನರ್ ನೀಡಲಾಯಿತು. ನಂತರ ಮೇಲುಕೋಟೆಗೆ ಆಗಮಿಸಿದ ಸಿಎಂ ಶಿವರಾಜ್ ಸಿಂಗ್ ಚೌವ್ಹಾಣ್ ದಂಪತಿ ಚಲುವನಾರಾಯಣ ಸ್ವಾಮಿಗೆ ಪೂಜೆ ಸಲ್ಲಿಸಿ ಹರಕೆ ತೀರಿಸಿದರು. ಈ ಹಿಂದೆಯೂ ಸಹ ಮೇಲುಕೋಟೆಗೆ ಆಗಮಿಸಿದ್ದ ಇವರು ಮುಖ್ಯಮಂತ್ರಿಗಳಾದ ನಂತರ ಎರಡನೇ ಬಾರಿಗೆ ಮೇಲುಕೋಟೆಗೆ ಆಗಮಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಶಿವರಾಜ್ ಸಿಂಗ್ ಚೌವ್ಹಾಣ್, ದೇವರ ದರ್ಶನ ಪಡೆದಿದ್ದೇನೆ. ಈ ಸಂದರ್ಭದಲ್ಲಿ ದೇಶ ಮತ್ತು ಮಧ್ಯಪ್ರದೇಶದ ಜನರಿಗೆ ಒಳ್ಳೆಯದನ್ನು ಮಾಡುವಂತೆ ಪ್ರಾರ್ಥಿಸಿದ್ದೇನೆ. ನಮ್ಮ ದೇಶದ ಪ್ರಧಾನಮಂತ್ರಿ ಆತ್ಮ ನಿರ್ಭರ ಸಂಕಲ್ಪ ಮಾಡಿದ್ದಾರೆ. ಈ ಸಂಕಲ್ಪ ಮಾಡಲು ಎಲ್ಲಾ ಪ್ರದೇಶಗಳಲ್ಲಿ ಆತ್ಮ ನಿರ್ಭರ ಮಾಡಬೇಕಾಗಿದೆ. ಇದಕ್ಕೆ ಮಧ್ಯಪ್ರದೇಶದ ಜನರು ಕೂಡ ಕೈ ಜೋಡಿಸಿದ್ದು, ಕೊರೊನಾ ಸಂಕಷ್ಟದಲ್ಲಿ ಜನರ ಹೃದಯದಲ್ಲಿ ಸಂತೋಷ ಬರಬೇಕಾಗಿದೆ. ನಮ್ಮ ದೇಶ ಭಾರತ ಮತ್ತೊಮ್ಮೆ ವಿಶ್ವಗುರುವಾಗಬೇಕಿದೆ ಎಂಬುದು ನನ್ನ ಪ್ರಾರ್ಥನೆ. ಅದಕ್ಕಾಗಿ ಎಲ್ಲರಿಗೂ ಒಳ್ಳೆಯ ಬುದ್ಧಿ ಕೊಡಲಿ ಎಂದು ಬೇಡಿಕೊಳ್ಳುತ್ತೇನೆ. ಮತ್ತೆ ಸಿಎಂ ಆಗಲು ಮೇಲುಕೋಟೆಯ ಭಗವಂತ ಕಾರಣ. ಭಗವಂತನ ಆಜ್ಞೆ ಇಲ್ಲದೆ ಏನು ಆಗುವುದಿಲ್ಲ. ಎಲ್ಲಾ ದೈವ ಕೃಪೆ ಎಂದರು.