ಮೈಸೂರು: ಬೆಂಗಳೂರು ಮತ್ತು ಮೈಸೂರು ದಶಪಥ ರಸ್ತೆ ಹೆದ್ದಾರಿ ಕಾಮಗಾರಿಯಲ್ಲಿ ಯಾವುದೇ ಹಗರಣ ನಡೆದಿಲ್ಲ. ಹೈವೇ ಮಾಡುವಾಗ ಕೆರೆಗಳ ಏರಿ ತೆಗೆದ ಪರಿಣಾಮ 40ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಖುದ್ದು ನಾನೇ ಪರಿಶೀಲನೆ ನಡೆಸಿದ್ದೇನೆ ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.
ಇಂದು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಮೈಸೂರಿಗೆ ಆಗಮಿಸಿದ್ದ ಅವರು, ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿ, ಬೆಂಗಳೂರು ಮತ್ತು ಮೈಸೂರು ನಡುವಿನ ದಶಪಥ ಕಾಮಗಾರಿಯಿಂದ ರಾಮನಗರ ಮತ್ತು ಚನ್ನಪಟ್ಟಣ ಬಳಿ ಅವಾಂತರವಾಗಿದೆ. ಹಲವು ಮನೆಗಳಿಗೆ ನೀರು ನುಗ್ಗಿದೆ. ನಾನೇ ಖುದ್ದು ಪರಿಶೀಲನೆ ಮಾಡಿದ್ದೇನೆ.
ಈ ಬಗ್ಗೆ ಸ್ಥಳೀಯ ಅಧಿಕಾರಿಗಳಿಗೆ ಹಾಗೂ ಹೆದ್ದಾರಿ ನಿರ್ಮಾಣದ ಅಧಿಕಾರಿಗಳಿಗೆ ಬೇಗ ಸರಿಪಡಿಸುವಂತೆ ಮಾಹಿತಿ ನೀಡಿದ್ದೇನೆ. ಆದರೆ, ಇದರಲ್ಲಿ ಯಾವುದೇ ಹಗರಣ ನಡೆದಿಲ್ಲ. ಕೆರೆ ಏರಿಯನ್ನು ಹೈವೇ ಮಾಡುವವರು ತೆಗೆದಿದ್ದಾರೆ. ಅದರಿಂದ ಈ ಅವಾಂತರ ಉಂಟಾಗಿದೆ. ಪರಿಣಾಮ 40 ಮನೆಗಳಿಗೆ ಹಾನಿಯಾಗಿದೆ. ಶೀಘ್ರವೇ ಇದನ್ನು ಸರಿಪಡಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ರಾಜಕಾಲುವೆ ಒತ್ತುವರಿಯಾಗಿದೆ. ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯಿಂದ ಜನರಿಗೆ ಸಂತೋಷವಾಗಿದೆ. ಪ್ರತಿ ವರ್ಷ ಕೆಲವು ಕಡೆ ಮಾತ್ರ ಮಳೆಯಾಗುತ್ತಿತ್ತು. ಆದರೆ, ಈ ಬಾರಿ ರಾಜ್ಯಾದ್ಯಂತ ಮಳೆಯಾಗುತ್ತಿದೆ. ಹೆಚ್ಚು ಮಳೆಯಾದಾಗ ತೊಂದರೆ ಸಹಜ. ಅದನ್ನು ಎದುರಿಸಲು ಸರ್ಕಾರ ಸಿದ್ಧವಿದೆ ಎಂದರು.
ಬೆಂಗಳೂರು ನಗರದ ಕೆಲವು ಲೇಔಟ್ಗಳಿಗೆ ಮಳೆ ನೀರು ನುಗ್ಗಿ, ಅವಾಂತರ ಸೃಷ್ಟಿಯಾಗಿದೆ. ನಗರದ ಎಲ್ಲವೂ ಸಿಮೆಂಟ್ ಕಾಂಕ್ರೀಟ್ ಆಗಿದ್ದು ಮಳೆಯ ನೀರು ಇಂಗಿ ಹೋಗುವುದಿಲ್ಲ. ಅಭಿವೃದ್ಧಿ ಹೆಸರಿನಲ್ಲಿ ರಾಜಕಾಲುವೆ ಒತ್ತುವರಿಯಾಗಿದೆ. ನೀರು ಹೋಗಲು ದಾರಿ ಇಲ್ಲದ ಕಾರಣ ಈ ರೀತಿ ಅನಾಹುತ ಆಗಿದೆ. ಇದರ ಪರಿಣಾಮ ಬಡಾವಣೆಗಳಿಗೆ ನೀರು ನುಗ್ಗಿದೆ. ಯಾವುದೇ ಕಾರಣಕ್ಕೂ ರಾಜಕಾಲುವೆಯನ್ನು ಮುಚ್ಚಬೇಡಿ ಎಂದು ಸರ್ಕಾರ ಮತ್ತು ಸಾರ್ವಜನಿಕರಿಗೆ ಮನವಿ ಮಾಡುವೆ ಎಂದರು.