ಮೈಸೂರು :ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ವಿರುದ್ಧ ದಿವಂಗತ ಜಿ.ಮಾದೇಗೌಡ ಅವರ ಪುತ್ರ ಮಧು ಜಿ ಮಾದೇಗೌಡ ಅವರು ಹರಿಹಾಯ್ದಿದ್ದಾರೆ.
ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ವಿರುದ್ಧ ಮಧು ಜಿ.ಮಾದೇಗೌಡ ವಾಗ್ದಾಳಿ ನಡೆಸಿರುವುದು.. ದಿವಂಗತ ಜಿ. ಮಾದೇಗೌಡ ಬಗ್ಗೆ ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ ಅವಹೇಳನಕಾರಿ ಪದ ಬಳಸಿ ಮಾತನಾಡಿದ್ದಾರೆ ಎನ್ನಲಾಗಿರುವ ಆಡಿಯೋ ವೈರಲ್ ವಿಚಾರವಾಗಿ ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮಧು ಜಿ.ಮಾದೇಗೌಡ ಅವರು, ಎಲ್.ಆರ್.ಶಿವರಾಮೇಗೌಡ ಒಬ್ಬ 420, ಹುಚ್ಚ. ಅವನ ಮಾತಿಗೆ ಹೆಚ್ಚಿನ ಮಹತ್ವ ಕೊಡುವ ಅಗತ್ಯವಿಲ್ಲ. ಇವನ ನಾಲಿಗೆಯೂ ಸರಿ ಇಲ್ಲ, ಕಚ್ಚೆಯೂ ಸರಿ ಇಲ್ಲ ಎಂದು ಕಿಡಿಕಾರಿದ್ದಾರೆ.
ಮಾದೇಗೌಡರಿಗೆ ಹೊಡೆಯುವುದಿರಲಿ, ಅವರ ಎದುರು ನಿಲ್ಲುವ ಶಕ್ತಿಯೂ ಅವನಿಗಿರಲಿಲ್ಲ. ನಮ್ಮ ತಂದೆಯ ಕಾಲಿಗೆ ಬಂದು ಬೀಳುತ್ತಿದ್ದ. ಅವನಿಗೆ ನಮ್ಮ ತಂದೆಯ ಎದುರು ನಿಲ್ಲವ ಶಕ್ತಿಯೂ ಇರಲಿಲ್ಲ. ನಮ್ಮಪ್ಪನ ಬಳಿ ಒದೆ ತಿಂದವರೆಲ್ಲ ಏನೇನೋ ಆಗಿದ್ದಾರೆ. ಆದ್ರೆ, ಇವನಿಗೆ ಒದೆಯಲಿಲ್ಲ, ಅದಕ್ಕಾಗಿ ಇವನು ಬೆಳೆದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ಸರಿಯಾದ ಅಭ್ಯರ್ಥಿಗಳಿಲ್ಲದೆ ಅವನು ಗೆದ್ದಿದ್ದ. ಅದು ಕೇವಲ ಆರು ತಿಂಗಳು ಮಾತ್ರ ಎಂಪಿ ಆಗಿದ್ದ. ಈಗ ಶಿವರಾಮೇಗೌಡನನ್ನ ಜನ ತಿರಸ್ಕರಿಸಿದ್ದಾರೆ. ನಿಖಿಲ್ ಕುಮಾರಸ್ವಾಮಿ ಸೋಲಿಗೆ ಇವನ ಹೇಳಿಕೆಗಳೇ ಕಾರಣ. ಬಾಯಿಗೆ ಬಂದಂತೆ ಮಾತನಾಡುತ್ತಾನೆ. ಅವನೊಬ್ಬ ಯೋಗ್ಯವಲ್ಲದ ವ್ಯಕ್ತಿ. ಮಂಡ್ಯಕ್ಕೆ ಬಂದರೆ ಅವನಿಗೆ ಮಾದೇಗೌಡರ ಅಭಿಮಾನಿಗಳು ತಕ್ಕ ಪಾಠ ಕಲಿಸ್ತಾರೆ ಎಂದು ಎಚ್ಚರಿಕೆ ನೀಡಿದರು.
ನಮ್ಮ ತಂದೆ ಮಾಡಿರುವ ಸೇವೆ ಜನರಿಗೆ ಗೊತ್ತಿದೆ. ನಮ್ಮ ತಂದೆಯ ಬಗ್ಗೆ ಮಾತನಾಡಿರೋದಕ್ಕೆ, ಶಿವರಾಮೇಗೌಡನಿಗೆ ಇಡೀ ಜಿಲ್ಲೆಯ ಜನ ಬುದ್ದಿ ಕಲಿಸುತ್ತಾರೆ. ಈಗಾಗಲೇ ಹಲವಾರು ಚುನಾವಣೆಗಳಲ್ಲಿ ಇವರನ್ನ ಜನರು ತಿರಸ್ಕರಿಸಿದ್ದಾರೆ. ಮುಂದೆಯೂ ಅವನಿಗೆ ಜನ ಬುದ್ದಿ ಕಲಿಸುತ್ತಾರೆ ಎಂದರು.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ