ಮೈಸೂರು :ಉಚಿತ ನಾಟಕ ತೋರಿಸುವುದು ಸಿದ್ದರಾಮಯ್ಯ ಅಕ್ಕಿ ಕೊಟ್ಟಂತೆ ಎಂಬ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಹೇಳಿಕೆಗೆ ಕೆಪಿಸಿಸಿ ವಕ್ತಾರ ಎಂ.ಲಕ್ಷಣ್ ಖಂಡನೆ ವ್ಯಕ್ತಪಡಿಸಿದ್ದು, ನಿಮ್ಮ ಅಡ್ಡಕಸುಬಿತನ ತೋರಿಸಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಬಡವರು ತಿನ್ನುವ ಅನ್ನಕ್ಕೂ ಬಿಜೆಪಿಯವರು ಕೇಸರಿ ಬಣ್ಣ ಬಳಿಯುವ ಕೆಲಸ ಮಾಡ್ತಿದ್ದಾರೆ. ನೀವು ಅಕ್ಕಿ ಬೆಳೆಯುವವರನ್ನು ಸಹಿಸಲ್ಲ, ಉಚಿತ ಅಕ್ಕಿ ಕೊಡುವವರನ್ನೂ ಸಹಿಸಲ್ಲ. ಕಾರ್ಯಪ್ಪ ನಿಮ್ಮ ವ್ಯಾಪ್ತಿಯಲ್ಲಿ ಏನಿದೆ ಅದನ್ನು ಮಾತ್ರ ಮಾಡಿ. ಮೈಸೂರಿನಲ್ಲಿ ನಿಮ್ಮ ಅಡ್ಡಕಸುಬಿತನ ತೋರಿಸಬೇಡಿ ಎಂದು ಹರಿಹಾಯ್ದರು.
ಅಡ್ಡಂಡ ಕಾರ್ಯಪ್ಪ ಬಂದಾಗಿಂದ ರಂಗಾಯಣದಲ್ಲಿ ಬಿಜೆಪಿ, ಆರೆಸ್ಸೆಸ್ ಅಜೆಂಡಾ ಹೇರುತ್ತಿದ್ದಾರೆ. ಸಿದ್ದರಾಮಯ್ಯನವರು ಜಾರಿಗೆ ತಂದ ಅನ್ನಭಾಗ್ಯ ಯೋಜನೆಯಿಂದ ಒಂದೂವರೆ ಕೋಟಿ ಜನ ಹೊಟ್ಟೆ ತುಂಬಿಸಿಕೊಂಡಿದ್ದಾರೆ. ಬಡವರ ಬಗ್ಗೆ ಟೀಕಿಸಿ ಸಂತೋಷ ಪಡುವ ಕೊಳಕು ಮನಸ್ಥಿತಿ ನಿಮ್ಮದು ಎಂದು ಅಡ್ಡಂಡ ಕಾರ್ಯಪ್ಪ ವಿರುದ್ಧ ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದರು.