ಕರ್ನಾಟಕ

karnataka

ETV Bharat / state

ರೇಣುಕಾಚಾರ್ಯ ತಮ್ಮ ಇಬ್ಬರು ಮಕ್ಕಳಿಗೂ ಫೇಕ್ ಎಸ್​ಸಿ ಸರ್ಟಿಫಿಕೇಟ್ ಕೊಡಿಸಿದ್ದಾರೆ: ಎಂ ಲಕ್ಷ್ಮಣ್ - Renukaacharya gives fake SC certificate to his two children says M. Laxman

ಸಿಎಂ ರಾಜಕೀಯ ಕಾರ್ಯದರ್ಶಿಯಾಗಿರುವ ರೇಣುಕಾಚಾರ್ಯ ಅವರು ತಮ್ಮ ಇಬ್ಬರು ಮಕ್ಕಳಿಗೆ ಫೇಕ್ ಎಸ್​ಸಿ ಸರ್ಟಿಫಿಕೇಟ್ ಕೊಡಿಸಿ, ಸರ್ಕಾರದ ಸವಲತ್ತುಗಳನ್ನು ಪಡೆದಿದ್ದಾರೆ.‌ ಈ ದಾಖಲೆಗಳನ್ನ ಸಿಎಂಗೆ ಕಳುಹಿಸಿದ್ದೇನೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಹೇಳಿದ್ದಾರೆ.

m-laxman
ಎಂ ಲಕ್ಷ್ಮಣ್ ಆರೋಪ

By

Published : Mar 24, 2022, 4:40 PM IST

ಮೈಸೂರು:ಹೊನ್ನಾಳಿ ಕ್ಷೇತ್ರದ ಶಾಸಕರೂ ಆಗಿರುವ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರು ತಮ್ಮ ಇಬ್ಬರು ಮಕ್ಕಳು ಸರ್ಕಾರಿ ಸವಲತ್ತು ಪಡೆಯಲಿ ಎಂಬ ಉದ್ದೇಶದಿಂದ ಫೇಕ್ ಎಸ್​ಸಿ ಸರ್ಟಿಫಿಕೇಟ್ ಕೊಡಿಸಿದ್ದಾರೆ. ಈ ದಾಖಲೆಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕಳಿಸಿದ್ದೇನೆ. ಕೂಡಲೇ ರೇಣುಕಾಚಾರ್ಯ ರಾಜೀನಾಮೆ ನೀಡಬೇಕೆಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಸಿಎಂ ರಾಜಕೀಯ ಕಾರ್ಯದರ್ಶಿಯಾಗಿರುವ ರೇಣುಕಾಚಾರ್ಯ ಜಗತ್ಪ್ರಸಿದ್ಧ ವ್ಯಕ್ತಿಯಾಗಿದ್ದಾರೆ. ಅವರು ಮಣ್ಣಿನ ಮೇಲೆ ದೋಣಿ ನಡೆಸುವ ವ್ಯಕ್ತಿ. ಈ ವ್ಯಕ್ತಿಗೆ ಇಬ್ಬರು ಮಕ್ಕಳಿದ್ದು, ಮಗ ಅಮೆರಿಕದಲ್ಲಿ ಎಂಜಿನಿಯರಿಂಗ್ ಮಾಡುತ್ತಿದ್ದಾನೆ. ಮಗಳು ಬೆಂಗಳೂರಿನಲ್ಲಿ ಪಿಯುಸಿ ಓದುತ್ತಿದ್ದಾಳೆ. ಇವರಿಬ್ಬರಿಗೂ ರೇಣುಕಾಚಾರ್ಯ ಫೇಕ್ ಎಸ್​ಸಿ ಸರ್ಟಿಫಿಕೇಟ್ ಕೊಡಿಸಿ, ಸರ್ಕಾರದ ಸವಲತ್ತುಗಳನ್ನು ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್

ಶಾಲಾ ದಾಖಲಾತಿಗಳಲ್ಲಿ ಲಿಂಗಾಯತ ಎಂದು ನಮೂದಾಗಿದೆ. ರೇಣುಕಾಚಾರ್ಯರ ಅಣ್ಣ ಎಂ.ಪಿ. ದಾರಕೇಶ್ವರಯ್ಯ ಕೂಡ ಎಸ್​ಸಿ ಸರ್ಟಿಫಿಕೇಟ್ ಪಡೆದಿದ್ದಾರೆ. ಇದಕ್ಕೆ ಬಿಜೆಪಿಯವರು ಉತ್ತರ ನೀಡಬೇಕು. ಇದೇ ಕೆಲಸ ಕಾಂಗ್ರೆಸ್​ನವರು ಮಾಡಿದ್ದರೆ, ಸುಮ್ಮನೆ ಇರುತ್ತಿದ್ದರಾ.‌ ಇದು ಕ್ರಿಮಿನಲ್ ಅಫೆನ್ಸ್ ಎಂದು ಎಂ ಲಕ್ಷ್ಮಣ್ ವಾಗ್ದಾಳಿ ನಡೆಸಿದರು. ಆದ್ರೆ ಈ ಬಗ್ಗೆ ನಿನ್ನೆಯೇ ಸ್ಪಷ್ಟೀಕರಣ ನೀಡಿರುವ ಶಾಸಕ ರೇಣುಕಾಚಾರ್ಯ, ತಮ್ಮ ಮಕ್ಕಳಿಗೆ ಯಾವುದೇ ರೀತಿಯ ನಕಲಿ ಜಾತಿ ಪ್ರಮಾಣ ಕೊಡಿಸಿಲ್ಲ. ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದಿದ್ದರು.

ಇದನ್ನೂ ಓದಿ:ದಿನವೂ ಏರುತ್ತಿರುವ ಬೆಲೆ: ಬಿಜೆಪಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಎಸ್​ಸಿ, ಎಸ್ಟಿ ಸೌಲಭ್ಯಗಳನ್ನ ಬಿಜೆಪಿ ಮುಖಂಡರು ಕಸಿಯುತ್ತಿದ್ದಾರೆ. ‌ಈ ವಿಚಾರದಲ್ಲಿ ಬಿಜೆಪಿ ಸರ್ಕಾರ ಮೌನ ವಹಿಸಿದೆ. ಈ ಬಗ್ಗೆ ಪ್ರಧಾನಿ ಮೋದಿ, ಸ್ಪೀಕರ್ ಹಾಗೂ ಎಸ್ಸಿ, ಎಸ್ಟಿ ಆಯೋಗಕ್ಕೆ ದೂರು ನೀಡುತ್ತೇನೆ‌. ರೇಣುಕಾಚಾರ್ಯ ಅಧಿಕಾರ ದುರುಪಯೋಗ ಪಡಿಸಿಕೊಂಡಿರುವುದರ ಬಗ್ಗೆ ತನಿಖೆಯಾಗಬೇಕು. ಅವರು ಹೇಳಿದ ಮಾತಿಗೆ ಬದ್ಧರಾಗಿ, ರಾಜೀನಾಮೆ ನೀಡಬೇಕು. ಬಿಜೆಪಿಯ ದಲಿತ ನಾಯಕರು ಏನು ಮಾಡುತ್ತಿದ್ದೀರಾ. ನಿಮ್ಮ ಸಮುದಾಯದಕ್ಕೆ ಅನ್ಯಾಯ ಆಗ್ತಿದ್ರೂ ಕಣ್ಮುಚ್ಚಿ ಕುಳಿತಿದ್ದೀರಾ ಎಂದು ಲಕ್ಷ್ಮಣ್​ ಪ್ರಶ್ನಿಸಿದರು.

ರಾಜ್ಯದಿಂದ ಹಿಂದೂಯೇತರರನ್ನು ಬಹಿಷ್ಕರಿಸುವ ಹುನ್ನಾರ:ಜಾತ್ರೆಗಳಲ್ಲಿ ಹಿಂದೂಯೇತರ ವರ್ತಕರಿಗೆ ಬಹಿಷ್ಕಾರ ಹಾಕಿದ್ದಾರೆ. ಕೆಲ ಹಿಂದೂ ಸಂಘಟನೆಗಳು ಕಾನೂನಿನ ವಿರುದ್ಧವಾಗಿ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದರು. ಇದು ರಾಜ್ಯದಿಂದ ಅನ್ಯ ಧರ್ಮಿಯರನ್ನು ಬಹಿಷ್ಕರಿಸುವ ಮಾಡುವ ಹುನ್ನಾರ. ಇದರಿಂದ ರಾಜ್ಯ ಮತ್ತು ದೇಶದ ಮರ್ಯಾದೆ ಹೋಗುತ್ತಿದೆ. ಗಲ್ಫ್ ದೇಶಗಳಾದ ದುಬೈ, ಕುವೈತ್, ಅಬುಧಾಬಿ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಭಾರತೀಯರು, ಹಿಂದೂಗಳು ಕೆಲಸ ಮಾಡುತ್ತಿದ್ದಾರೆ. ಒಂದು ವೇಳೆ ಅವರನ್ನ ಅಲ್ಲಿಂದ ಬಹಿಷ್ಕಾರ ಮಾಡಿದರೆ, ನೀವು ಅವರಿಗೆ ಕೆಲಸ ಕೊಡುತ್ತೀರಾ ಎಂದು ಕೆಪಿಸಿಸಿ ವಕ್ತಾರ ಪ್ರಶ್ನಿಸಿದರು.

ದಿ ಕಾಶ್ಮೀರ್​​​ ಫೈಲ್ಸ್​​ ಸಿನಿಮಾ ವಿಚಾರವಾಗಿ ಮಾತನಾಡಿ, ಸಿನಿಮಾ ಮೂಲಕ ಕೋಮು ಸೌಹಾರ್ದತೆಯನ್ನು ಕೆಡಿಸಲಾಗುತ್ತಿದೆ. ಜೇಮ್ಸ್ ಚಿತ್ರವನ್ನು ತೆಗೆದು ಕಾಶ್ಮೀರ್​ ಫೈಲ್ಸ್ ಚಿತ್ರ ಪ್ರದರ್ಶನ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ. ಬಿಜೆಪಿ ಕೆಲ ಶಾಸಕರು, ಕಾರ್ಯಕರ್ತರು ಜೇಮ್ಸ್ ಚಿತ್ರ ತೆಗೆಯುವಂತೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ಈ ಕುರಿತಂತೆ ಬುಧವಾರ ಮಾತನಾಡಿದ್ದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಜೇಮ್ಸ್​ ಚಿತ್ರ ಪ್ರದರ್ಶನಕ್ಕೆ ಯಾವುದೇ ಅಡ್ಡಿ ಆಗಿಲ್ಲ. ಬಿಜೆಪಿ ವಿರುದ್ಧ ವಿನಾಕಾರಣ ಆರೋಪ ಮಾಡಲಾಗ್ತಿದ್ದು, ಇದು ನಿರಾಧಾರ ಎಂದು ಹೇಳಿದ್ದರು.

For All Latest Updates

TAGGED:

ABOUT THE AUTHOR

...view details