ಮೈಸೂರು:ದೇಶದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಕರ್ನಾಟಕದ ಬಂಡೀಪುರ ಹಾಗೂ ನಾಗರಹೊಳೆ ಪ್ರವಾಸಿಗರ ನೆಚ್ಚಿನ ತಾಣವಾಗಿದ್ದು, ಇಲ್ಲಿಗೆ ಸಫಾರಿಗಾಗಿ ಜನರು ಹಾಗೂ ಗಣ್ಯರು ಆಗಮಿಸುತ್ತಾರೆ. ಇಲ್ಲಿ ಸಫಾರಿಗಾಗಿ ಬರುವ ಪ್ರವಾಸಿಗೆ ಹುಲಿಗಳು ದರ್ಶನ ನೀಡುತ್ತವೆ. ಸಫಾರಿಯಲ್ಲಿ ಪದೇ ಪದೇ ಕಾಣಿಸಿಕೊಳ್ಳುವ ಹುಲಿಗಳ ಗಾಂಭೀರ್ಯದ ವರ್ತನೆ, ನಡೆಗೆ ಮತ್ತು ಚೆಲ್ಲಾಟಗಳನ್ನು ಆಧರಿಸಿ, ವನ್ಯಜೀವಿ ಛಾಯಾಗ್ರಾಹಕರು ಹಾಗೂ ಅರಣ್ಯ ಅಧಿಕಾರಿಗಳು ಈ ಹುಲಿಗಳಿಗೆ ಒಂದೊಂದು ಹೆಸರನ್ನು ಇಟ್ಟಿದ್ದಾರೆ. ಅದೇ ಹೆಸರಿನಿಂದ ಇಂದಿಗೂ ಪ್ರಖ್ಯಾತವಾಗಿರುವ ವ್ಯಾಘ್ರಗಳ ವಿವರವಾದ ಮಾಹಿತಿ ಇಲ್ಲಿದೆ.
ಬಂಡೀಪುರ ಸಫಾರಿ:ದೇಶದಲ್ಲೇ ಅತಿ ದೊಡ್ಡದಾದ ವಿಸ್ತಾರ ಹೊಂದಿರುವ ಹುಲಿ ಸಂರಕ್ಷಿತ ಪ್ರದೇಶ ಎಂಬ ಖ್ಯಾತಿ ಪಡೆದಿರುವ ಬಂಡೀಪುರ ಸಫಾರಿಯಲ್ಲಿ, ಹಲವಾರು ವರ್ಷಗಳ ಕಾಲ ಸಫಾರಿ ಜನರಿಗೆ ದರ್ಶನ ನೀಡಿರುವ ಹಾಗೂ ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕರ ಫೋಟೊಗಳಿಗೆ ಸೆರೆಯಾಗಿರುವ ಪ್ರಿನ್ಸ್ ಎಂಬ ಖ್ಯಾತಿಯ ಹುಲಿ ಬಂಡೀಪುರ ಸಫಾರಿಯಲ್ಲಿ ಪ್ರಸಿದ್ಧಿಯಾಗಿದೆ. ಆನಂತರ ಮಾದೇಶ ಎಂಬ ಹುಲಿ ಸಫಾರಿಯಲ್ಲಿ ಕಾಣಿಸಿಕೊಳ್ಳುತ್ತಿತ್ತು. ಇವೆರಡು ಹುಲಿಗಳು ಮೃತಪಟ್ಟ ನಂತರ ಈಗ ಬಾರ್ಡರ್ ಮೇಲ್ ಎಂಬ ಹುಲಿ ಆಗಾಗ ಸಫಾರಿಯಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ, ಇತ್ತೀಚೆಗೆ ಬಂಡೀಪುರ ಸಫಾರಿಯಲ್ಲಿ ಹುಲಿಗಳ ದರ್ಶನ ಕಷ್ಟವಾಗಿದೆ. ಈ ಹುಲಿಗಳು ದಟ್ಟಾರಣ್ಯದಲ್ಲಿ ಇರುವುದರಿಂದ ಸಫಾರಿ ದರ್ಶನ ಕಷ್ಟವಾಗಿದೆ ಎನ್ನತ್ತಾರೆ ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕ ಶ್ರೇಯಸ್ ದೇವನೂರು.
ನಾಗರಹೊಳೆ ಸಫಾರಿ:ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಂತಿರುವ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ದಮ್ಮನಕಟ್ಟೆ ಸಫಾರಿ ಕೇಂದ್ರ ಹಾಗೂ ಕಬಿನಿ ಬ್ಯಾಕ್ ವಾಟರ್ ಪ್ರದೇಶದ ಸಫಾರಿಯಲ್ಲಿ ಅತಿ ಹೆಚ್ಚು ಕಾಡುಪ್ರಾಣಿಗಳು ಸಫಾರಿಯಲ್ಲಿ ಕಾಣ ಸಿಗುತ್ತವೆ. ಅದರಲ್ಲಿ ಹುಲಿಗಳ ದರ್ಶನ ಹೆಚ್ಚಾಗಿ ಕಂಡುಬರುತ್ತದೆ. ಈ ಭಾಗದಲ್ಲಿ ಹೆಚ್ಚಾಗಿ ಸಫಾರಿಯಲ್ಲಿ ಕಂಡುಬಂದ ಹುಲಿಗಳನ್ನು ಒಂದೊಂದು ಹೆಸರಿನಿಂದ ಕರೆಯಲಾಗುತ್ತದೆ.