ಮೈಸೂರು:ಹಳೆಯ ವೈಮನಸ್ಸು ಮರೆತು 29 ದಂಪತಿ ಮತ್ತೆ ಹೊಸ ಬದುಕಿಗೆ ಅಡಿಯಿಟ್ಟರು. ಹಳಿ ತಪ್ಪಿದ ದಾಂಪತ್ಯ ಜೀವನವನ್ನು ಸರಿಪಡಿಸಿ ಬದುಕಿ ಬಾಳುವ ಮನಸ್ಸು ಮಾಡಿದರು. ಇದಕ್ಕೆ ಕಾರಣವಾಗಿದ್ದು ಮೈಸೂರಿನಲ್ಲಿ ನಡೆದ ಲೋಕ ಅದಾಲತ್.
ಮೈಸೂರು ತಾಲೂಕಿನ 20, ತಿ.ನರಸೀಪುರ, ಪಿರಿಯಾಪಟ್ಟಣದ ತಲಾ 2, ನಂಜನಗೂಡು, ಹುಣಸೂರಿನ ತಲಾ 1, ಎಚ್.ಡಿ. ಕೋಟೆಯ ಮೂರು ಜೋಡಿಗಳು ವಿಚ್ಛೇದನ ನಿರ್ಧಾರದಿಂದ ಹೊರಬಂದು ಒಂದಾದರು. ಲೋಕ ಅದಾಲತ್‌ನಲ್ಲಿ ಒಟ್ಟು 94 ಜೀವನಾಂಶ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.
72 ಲಕ್ಷ ರೂ ದಂಡ ವಸೂಲಿ: ಟ್ರಾಫಿಕ್ ನಿಯಮ ಉಲ್ಲಂಘನೆಗೆ ಸಂಬಂಧಿಸಿದ 16,746 ಪ್ರಕರಣಗಳಲ್ಲಿ ಸಾರ್ವಜನಿಕರು 72,42,100 ರೂ. ದಂಡ ಪಾವತಿಸಿದ್ದಾರೆ. ಬ್ಯಾಂಕ್‌ಗೆ ಸಂಬಂಧಿಸಿದ 246 ಪ್ರಕರಣಗಳಲ್ಲಿ 1,85,42,722 ರೂ., ಬಿಎಸ್‌ಎನ್‌ಎಲ್‌ಗೆ ಸಂಬಂಧಿಸಿದ 62 ಪ್ರಕರಣಗಳಲ್ಲಿ 1,51,942 ರೂ. ಹಣವನ್ನು ಸಂಬಂಧಿಸಿದವರು ಪಾವತಿಸಿ ಪ್ರಕರಣ ಇತ್ಯರ್ಥ ಮಾಡಿಕೊಂಡರು.
4.25 ಕೋಟಿ ರೂ. ನೀರಿನ ಬಿಲ್ ವಸೂಲಿ: ಮೈಸೂರು ನಗರ ಪಾಲಿಕೆಗೆ ನೀರಿನ ಬಿಲ್ ಪಾವತಿ ಮಾಡದಿರುವ 37,762 ಪ್ರಕರಣಗಳು ದಾಖಲಾಗಿದ್ದವು. ಎಲ್ಲ ಪ್ರಕರಣಗಳನ್ನು ಇತ್ಯರ್ಥಪಡಿಸಿ 4,25,50,053 ರೂ. ಬಿಲ್ ಅನ್ನು ನ್ಯಾಯಾಲಯದಲ್ಲಿ ಗ್ರಾಹಕರು ಪಾವತಿಸಿದ್ದಾರೆ.