ಮೈಸೂರು: ಮೈಸೂರಿನಲ್ಲಿ ಜೂ.21ರಂದು ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಮಳೆಯಿಂದ ಅಡ್ಡಿ ಉಂಟಾದರೆ, ಬದಲಿ ವ್ಯವಸ್ಥೆ ಮಾಡಲು ಪೊಲೀಸರು, ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಮಳೆಯಿಂದ ರಕ್ಷಣೆ ಹಾಗೂ ಭದ್ರತೆ ದೃಷ್ಟಿಯಿಂದ ಬದಲಿ ಸ್ಥಳವಾಗಿ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ಯೋಗ ಕಾರ್ಯಕ್ರಮ ನಡೆಸಲು ಚಿಂತನೆ ನಡೆಸಲಾಗಿದೆ.
ಈ ಸಂಬಂಧ ಡಿಸಿಪಿ ಗೀತಾ ಪ್ರಸನ್ನ ಅವರು ಇಂದು ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣ ಪರಿಶೀಲಿಸಿದರು. ವೇದಿಕೆ ಎಲ್ಲಿ ಸಿದ್ಧಪಡಿಸುವುದು, ವಿವಿಐಪಿ, ವಿಐಪಿಗೆ ಸ್ಥಳ, ಯೋಗ ಮಾಡುವ ಸ್ಥಳ, ಪಾರ್ಕಿಂಗ್ ವ್ಯವಸ್ಥೆ ಪರಿಶೀಲಿಸಿದರು. ವಾಹನಗಳ ಮಾರ್ಗದರ್ಶನದ ಬಗ್ಗೆ ಮಾಹಿತಿ ಪಡೆದುಕೊಂಡರು. ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸುರೇಶ್ ಮಾಹಿತಿ ನೀಡಿದರು.