ಮೈಸೂರು :ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವೈಜ್ಞಾನಿಕವಾಗಿ ಬೂದು ನೀರು ನಿರ್ವಹಣೆ, ಘನ ತ್ಯಾಜ್ಯ ನಿರ್ವಹಣೆಗೆ ಹೆಚ್ಚು ಒತ್ತು ನೀಡುವ ಮೂಲಕ ಹಳ್ಳಿಗಳು ಸ್ವಚ್ಛ ಹಾಗೂ ಸುಂದರವಾಗಿ ಕಾಣುವಂತೆ ಎಲ್ಲ ಅಧಿಕಾರಿಗಳು ಶ್ರಮಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಹೇಳಿದರು.
ಮೈಸೂರು ಜಿಲ್ಲಾ ಪಂಚಾಯಿತಿಯಲ್ಲಿ ಮಂಗಳವಾರ ಆಯೋಜಿಸಿದ್ದ ಸ್ವಚ್ಚ ಭಾರತ ಮಿಷನ್ (ಗ್ರಾಮೀಣ) ಮತ್ತು ಜಲ್ ಜೀವನ್ ಮಿಷನ್ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸ್ವಚ್ಛ ಭಾರತ ಮಿಷನ್ ಯೋಜನೆಯ ಆರಂಭದ ದಿನಗಳಲ್ಲಿ ಗ್ರಾಮೀಣ ಭಾಗದ ಪ್ರತಿ ಮನೆಗಳಲ್ಲಿ ಶೌಚಾಲಯ ನಿರ್ಮಾಣ ಪ್ರಮುಖ ಗುರಿಯಾಗಿತ್ತು. 2019ರ ವೇಳೆಗೆ ಈ ಗುರಿಯನ್ನು ಸಾಧಿಸಿದ್ದೇವೆ ಎಂದರು.
ಈಗಲೂ ಕೆಲವು ಗ್ರಾಮಗಳಲ್ಲಿ ಮನೆಯಲ್ಲಿ ಶೌಚಾಲಯವಿದ್ದರೂ ಬಹಿರ್ದೆಸೆಗೆ ಹೋಗುವ ಪುರುಷರು ಹಲವರಿದ್ದಾರೆ. ಅವರಿಗೆ ಅರಿವು ಮೂಡಿಸಿ ಶೌಚಾಲಯ ಉಪಯೋಗಿಸಲು ಮನವೊಲಿಸಬೇಕು ಎಂದು ತಿಳಿಸಿದರು. ಪ್ರತಿಯೊಂದು ಹಳ್ಳಿಗಳು ನೈರ್ಮಲ್ಯದಿಂದ ಕೂಡಿರಬೇಕು. ಗ್ರಾಮೀಣ ಭಾಗದಲ್ಲಿ ಶೌಚಾಲಯ ಹಾಗೂ ದಿನಬಳಕೆಯ ಬೂದು ನೀರನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು.
ವೈಜ್ಞಾನಿಕವಾಗಿ ಇಂಗುಗುಂಡಿ ನಿರ್ಮಾಣ :ಚರಂಡಿಗಳನ್ನು ವೈಜ್ಞಾನಿಕವಾಗಿ ನಿರ್ಮಿಸಿ ಇಂಗುಗುಂಡಿಯಲ್ಲಿ ತ್ಯಾಜ್ಯ ನೀರನ್ನು ಇಂಗುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಪ್ರತಿ ಗ್ರಾಮ ಸಭೆಗಳಲ್ಲಿ ಮೊದಲ ಅಜೆಂಡಾವಾಗಿ ಸ್ವಚ್ಚತೆಯನ್ನು ಪರಿಗಣಿಸಬೇಕು. ಕಸ ಸಂಗ್ರಹಣೆ, ವಿಂಗಡಣೆ, ಸ್ವಚ್ಛತಾ ವಾಹನಗಳ ಬಳಕೆ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯರುಗಳ ಜೊತೆ ಚರ್ಚಿಸಿ, ಸಮಸ್ಯೆ ಇದ್ದರೆ ಅದಕ್ಕೆ ಶೀಘ್ರವೇ ಪರಿಹಾರವನ್ನು ಕಂಡುಕೊಳ್ಳುಬೇಕು ಎಂದು ಸೂಚಿಸಿದರು.
ಸ್ವಚ್ಛ ಶನಿವಾರ:ಇನ್ನಷ್ಟು ಪರಿಣಾಮಕಾರಿಯಾಗಿ ಸ್ವಚ್ಛ ಶನಿವಾರ ಕಾರ್ಯಕ್ರಮವನ್ನು ಆಚರಿಸಿ ಜನರಿಗೆ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಬೇಕು. ಅನೈರ್ಮಲ್ಯವು ವೇಗವಾಗಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಅವರ ಶೈಕ್ಷಣಿಕ ಜೀವನಕ್ಕೆ ತೊಂದರೆಯಾಗುತ್ತದೆ. ಅಲ್ಲದೆ ಹಿರಿಯ ಜೀವಗಳ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂದರು.
ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ :ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣವು ಕಡ್ಡಾಯವಾಗಿ ಪ್ರಸಕ್ತ ಆರ್ಥಿಕ ವರ್ಷದ ಅಂತ್ಯದೊಳಗೆ ಮುಕ್ತಾಯಗೊಳ್ಳಬೇಕು. ಅಲ್ಲಿಯವರೆಗೆ ತಾತ್ಕಾಲಿಕ ಶೆಡ್ಗಳಲ್ಲಿ ಕಸ ಸಂಗ್ರಹಣೆ, ವಿಂಗಡಣೆ ಕಾರ್ಯ ನಿರಂತರವಾಗಿ ನಡೆಯಲು ಕ್ರಮ ಕೈಗೊಳ್ಳುವಂತೆ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯದ ಇಲಾಖೆಯ ಆಯುಕ್ತರಾದ ಗಂಗಾಧರ ಸ್ವಾಮಿ ಅವರು ಮಾತನಾಡಿ, ಜಲ ಜೀವನ್ ಮಿಷನ್ ಯೋಜನೆ ಅಡಿ ಪ್ರತಿ ಮನೆಗಳಿಗೂ ನಲ್ಲಿಗಳನ್ನು ಅಳವಡಿಸಿ, ನೀರು ಹರಿಸಬೇಕು. ಗ್ರಾಮಗಳಲ್ಲಿ ನೀರು ಬಿಡುವ ನಿಗದಿತ ಸಮಯದ ಬಗ್ಗೆ ಪ್ರತಿಯೊಬ್ಬ ಗ್ರಾಮಸ್ಥರ ಗಮನದಲ್ಲಿರಬೇಕು ಎಂದು ಹೇಳಿದರು.
ಸಭೆಯಲ್ಲಿ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆಯ ಉಪ ಕಾರ್ಯದರ್ಶಿ ಮಹೇಶ್ , ಮೈಸೂರು ವಿಭಾಗ ಮಟ್ಟದ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು, ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ, ಉಡುಪಿ ಜಿಲ್ಲೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಸ್ವ.ಭಾ.ಮಿ ನೋಡಲ್ ಅಧಿಕಾರಿಗಳು, ಕಾರ್ಯಪಾಲಕ ಅಭಿಯಂತರರು, ಕಾರ್ಯನಿರ್ವಾಹಕ ಅಧಿಕಾರಿಗಳು, ರಾಜ್ಯ ಸಮಾಲೋಚಕರು, ಸ್ವ.ಭಾ.ಮಿ ಜಿಲ್ಲಾ ಸಮಾಲೋಚಕರು, ಜೆ.ಜೆ.ಎಮ್ ಜಿಲ್ಲಾ ಸಮಾಲೋಚಕರು ಹಾಗೂ ಮುಂತಾದ ಸಿಬ್ಬಂದಿಗಳು ಹಾಜರಿದ್ದರು.
ಇದನ್ನೂ ಓದಿ :ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆ ನಿವಾರಿಸಿದ ರಿಸೈಕಲ್ ಸಂಸ್ಥೆಗೆ ಡಿಜಿಟಲ್ ಇಂಡಿಯಾ ಪ್ರಶಸ್ತಿ ಗರಿ..