ಮೈಸೂರು : ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರುವಾಗ ಕೆಲವರು ಪಿಎಸ್ಐ ಹಗರಣದಲ್ಲಿ ನನ್ನ ಹೆಸರನ್ನೂ ಸಹ ತೇಲಿಬಿಟ್ಟಿದ್ದರು. ಈಗ ಬಹುಮತ ಪಡೆದು ಕಾಂಗ್ರೆಸ್ ಸರ್ಕಾರ ರಾಜ್ಯದ ಚುಕ್ಕಾಣಿ ಹಿಡಿದಿದೆ. ಪಿಎಸ್ಐ ಹಗರಣವನ್ನು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗು ಶಾಸಕ ಬಿ.ವೈ.ವಿಜಯೇಂದ್ರ ಮೈಸೂರಿನಲ್ಲಿ ಹೇಳಿಕೆ ನೀಡಿದರು.
ಇಂದು ಖಾಸಗಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮೈಸೂರಿಗೆ ಬಿ.ವೈ.ವಿಜಯೇಂದ್ರ ಅವರು ಆಗಮಿಸಿದ್ದರು. ಈ ಸಂದರ್ಭದಲ್ಲಿ ನಗರದ ಖಾಸಗಿ ಹೋಟೆಲ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ತೋರಿಸಿ ಮತ ಪಡೆದಿದ್ದಾರೆ. ಜನರು ಕಾಂಗ್ರೆಸ್ ಸರ್ಕಾರದ ಮೇಲೆ ಬಹಳ ನಿರೀಕ್ಷೆ ಇಟ್ಟಿದ್ದಾರೆ.
ಇದನ್ನೂ ಓದಿ :ಗ್ಯಾರಂಟಿ ಹೆಸರಿನಲ್ಲಿ ಜನರಿಗೆ ಕಾಂಗ್ರೆಸ್ ಸರ್ಕಾರ ಟೋಪಿ ಹಾಕುತ್ತಿದೆ: ಸಂಸದ ಪ್ರತಾಪ್ ಸಿಂಹ
ಮುಖ್ಯಮಂತ್ರಿಗಳು ಗ್ಯಾರಂಟಿಗಳನ್ನು ಘೋಷಣೆ ಸಹ ಮಾಡಿದ್ದು, ಅವರ ಗ್ಯಾರಂಟಿ ಯೋಜನೆಗಳಿಗಾಗಿ ಜನರ ಮೇಲೆ ಇನ್ನೂ ಹೆಚ್ಚಿನ ತೆರಿಗೆ ಹಾಕುತ್ತಾರಾ ಅಥವಾ ಸಾಲದ ಹೊರೆಯನ್ನು ಹೆಚ್ಚು ಮಾಡುತ್ತಾರಾ? ಈಗಾಗಲೇ ಪ್ರತಿ ಯೂನಿಟ್‌ಗೆ 75 ಪೈಸೆ ಹೆಚ್ಚಳ ಮಾಡಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.