ಮೈಸೂರು: ಪರಿಶಿಷ್ಟ ಜಾತಿ ಜನರ ಶ್ರೇಯೋಭಿವೃದ್ಧಿಗೆ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು ಅವು ಅರ್ಹ ಎಸ್ಸಿ ಸಮುದಾಯದ ಜನರಿಗೆ ತಲುಪುವಂತಾಗಬೇಕು. ಸರ್ಕಾರದ ಯೋಜನೆಗಳ ಅರಿವು ಮೂಡಿಸುವ ಕಾರ್ಯಕ್ರಮಗಳಾಗಬೇಕು ಎಂದು ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ಸದಸ್ಯೆ ಡಾ. ಅಂಜು ಬಾಲಾ ಹೇಳಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಜನ್ಧನ್ ಯೋಜನೆಯಡಿ ಹಲವು ಉಪಯೋಗಗಳು ಇವೆ. ಈ ಯೋಜನೆಯಿಂದ ವಂಚಿತರಾದವರನ್ನು ಗುರುತಿಸಿ ಅವರಿಗೆ ಈ ಯೋಜನೆಗಳ ಲಾಭ ಸಿಗಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ವಿದ್ಯಾಭ್ಯಾಸ ಸಾಲದ ಬಗ್ಗೆ ಆದ್ಯತೆ ವಹಿಸಬೇಕು. ಪ್ರತಿಯೊಂದು ಸಾಲಗಳು ಹೇಗೆ ತಿರಸ್ಕಾರ ಆಗುತ್ತಿದೆ ಮತ್ತೆ ಏಕೆ ಎಂಬುದನ್ನು ಒಂದು ವರದಿ ಸಲ್ಲಿಸಿ, ಸಭೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಪ್ರತಿಯೊಂದು ಸಭೆಯಲ್ಲೂ ಸರ್ಕಾರದ ಯೋಜನೆಗಳನ್ನು ಜಾರಿಗೆ ತಂದಿರುವ ಬಗ್ಗೆ ಮಾಹಿತಿ ಪಡೆಯಬೇಕಾಗುತ್ತದೆ. ಆಯೋಗವು ಮಾಹಿತಿ ಬೇಕಾದಾಗ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆಯುತ್ತದೆ. ಪತ್ರಕ್ಕೆ 15 ದಿನದ ಒಳಗೆ ಉತ್ತರ ನೀಡಬೇಕು, ಇಲ್ಲವಾದರೆ ಇದರ ಪರಿಣಾಮ ಬೇರೆ ರೀತಿ ಇರುತ್ತದೆ ಎಂದು ಎಚ್ಚರಿಕೆ ನೀಡಿದರು.
ಆಯೋಗಕ್ಕೆ ಯಾರಿಗೂ ತೊಂದರೆ ನೀಡುವ ಉದ್ದೇಶವಿಲ್ಲ. ಆದರೆ ಅಧಿಕಾರಿಗಳು ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಹಾಗೂ ನ್ಯಾಯಸಮ್ಮತವಾಗಿ ಮಾಡಬೇಕು. ಪೊಲೀಸ್ ಇಲಾಖೆಯಿಂದ ಕಳೆದ ಬಾರಿ ಪ್ರಗತಿಪರಿಶೀಲನಾ ಸಭೆಯಲ್ಲಿ ನೋಡಿದಂತೆ ಈ ಬಾರಿ ಅನೇಕ ಬದಲಾವಣೆಗಳಾಗಿದ್ದು, ಇಲಾಖೆಯು ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ಅವರು ಶ್ಲಾಘಿಸಿದರು.
ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಜನನಿ ಸುರಕ್ಷಾ ಯೋಜನೆಯಡಿ 2020-21 ನೇ ಸಾಲಿನಲ್ಲಿ 21,076 ಫಲಾನುಭವಿಗಳಿದ್ದು, ಶೇ.25 ರಷ್ಟು ಫಲಾನುಭವಿಗಳು ಪರಿಶಿಷ್ಟ ಜಾತಿಯವರು ಇದ್ದಾರೆ. 2022-23 ನೇ ಸಾಲಿಗೆ 9,131 ಫಲಾನುಭವಿಗಳಿದ್ದು ಅದರಲ್ಲಿ 1,944 ಜನ ಪರಿಶಿಷ್ಟ ಜಾತಿಯವರು ಇದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪ್ರಸಾದ್ ತಿಳಿಸಿದರು.