ಮೈಸೂರು:ರೇಸ್ ಕೋರ್ಸ್ ಅಂಗಳದಲ್ಲಿ ಇಂದು ಮಂಜು ಕವಿದ ವಾತವಾರಣದಲ್ಲೂ ನಗರದಲ್ಲಿ ಯೋಗಥಾನ್ - 2023 ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಬೆಳಿಗ್ಗೆ ಯೋಗಥಾನ್ಗೆಂದು ಸಿದ್ಧಪಡಿಸಿದ್ದ ವೇದಿಕೆ ಗಣ್ಯರಿಗಾಗಿ ಕಾಯುತ್ತಾ ಮಾಗಿ ಚಳಿಗೆ ಗಢ ಗಢ ನಡುಗುತ್ತಿತ್ತು. ಪತ್ರಕರ್ತರ ಗ್ಯಾಲರಿಯ ಕುರ್ಚಿಗಳು ಮಂಜಿನ ಹನಿಗಳಿಗೆ ತೊಯ್ದು ತೊಪ್ಪೆಯಾಗಿದ್ದವು. ಅಷ್ಟರಲ್ಲಿ ದೂರದಿಂದ ಸಾಗಿಬಂದ ಶ್ವೇತ ವಸ್ತ್ರಧಾರಿ ಪುಟ್ಟ ಪುಟ್ಟ ಮಕ್ಕಳು, ಮುಸುಕಿದ್ದ ಮಂಜನ್ನು ದೂರ ಸರಿಸುವ ದೇವಿ ಮಾನವರಂತೆ ಕಂಡರು.
ನಂತರ ಕೆಲವೇ ಹೊತ್ತಿನಲ್ಲಿ ಲಗುಬಗೆಯಿಂದ ಹಾಜರಾದ ಶಾಸಕರಾದ ಎಸ್.ಎ.ರಾಮದಾಸ್ ಅವರು ವೇದಿಕೆ ಏರುತ್ತಿದ್ದಂತೆ ಜಿಲ್ಲಾಧಿಕಾರಿ ಸೇರಿದಂತೆ ಇತರೆ ಅಧಿಕಾರಿಗಳು ಸಾಥ್ ನೀಡಿದರು. ಸಾಗರೋಪಾದಿಯಲ್ಲಿ ಸಾಗಿಬಂದ ಯುವ ಸಮೂಹ ರೇಸ್ ಕೋರ್ಸ್ ಅಂಗಳದಲ್ಲಿ ಸಮಾವೇಶಗೊಳ್ಳುತ್ತಿದ್ದಂತೆ ಮಂಜು ತಾನಾಗೆ ಕರಗಿ ಸೂರ್ಯನಿಗೆ ದಾರಿ ಮಾಡಿ ಕೊಟ್ಟಿತು. ನಸುನಗುತ ಮೇಲೇರಿ ಬಂದ ಸೂರ್ಯ ದೇವ ಮುಗುಳ್ನಗೆಯಿಂದ ಕಾರ್ಯಕ್ರಮಕ್ಕೆ ಶುಭ ಹಾರೈಸಿದಂತೆ ಕಂಡುಬಂತು.
ಬಳಿಕ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವಜನ ಸೇವಾ ಇಲಾಖೆ, ಆಯುಷ್ ಇಲಾಖೆ, ನೆಹರು ಯುವಕ ಕೇಂದ್ರ, ಎನ್.ಎನ್.ಎಸ್ ಘಟಕದ ಸಂಯುಕ್ತಾಶ್ರಯದಲ್ಲಿ ನಡೆದ ಯೋಗಥಾನ್-2023 ಕಾರ್ಯಕ್ರಮವನ್ನು ಶಾಸಕರಾದ ಎಸ್.ಎ.ರಾಮದಾಸ್ ಉದ್ಘಾಟಿಸಿದರು. ಈ ವೇಳೆ ಅವರು ಯೋಗದ ಬಗ್ಗೆ ಮತ್ತು ಮೈಸೂರಿನ ವೈಭದ ಗುಣಗಾನ ಮಾಡಿದರು.
1.5 ಲಕ್ಷ ಜನರಿಂದ ಯೋಗ ಮಾಡಿಸುವ ಮೂಲಕ ವಿಶ್ವ ದಾಖಲೆ : ಪ್ರತಿ ವರ್ಷ ಅಂತರಾಷ್ಟ್ರೀಯ ಯೋಗದಿನಾಚರಣೆಯನ್ನು ಬಹಳ ವಿಶೇಷವಾಗಿ ನಡೆಸಿಕೊಂಡು ಬಂದಿರು ಮೈಸೂರು, ಈಗಾಗಲೇ ಯೋಗ ಹಬ್ ಎಂದು ಹೆಸರು ಪಡೆದಿದೆ. ಹೀಗಿರುವಾಗ ಮೈಸೂರಿನಲ್ಲಿ 1.5 ಲಕ್ಷ ಜನರಿಂದ ಯೋಗ ಮಾಡಿಸುವ ಮೂಲಕ ವಿಶ್ವ ದಾಖಲೆ ಬರೆಯೋಣ ಎಂದು ಶಾಸಕರಾದ ಎಸ್.ಎ.ರಾಮದಾಸ್ ಹೇಳಿದರು. ಈಗಾಗಲೇ ಬಾಬಾ ರಾಮದೇವ್ ಅವರು ಹರಿದ್ವಾರದಲ್ಲಿ 1 ಲಕ್ಷ ಜನರಿಂದ ಯೋಗ ಮಾಡಿಸುವ ಮೂಲಕ ವಿಶ್ವ ದಾಖಲೆ ಬರೆದಿದ್ದು, ನಾವು 2023 ರ ಜೂನ್ 21ರ ವಿಶ್ವ ಯೋಗ ದಿನದಂದು ಬಾಬಾ ರಾಮದೇವ್ ಅವರನ್ನು ಮೈಸೂರಿಗೆ ಆಹ್ವಾನಿಸಿ 1.5 ಲಕ್ಷ ಜನರಿಂದ ಯೋಗ ಮಾಡಿಸುವ ಮೂಲಕ ಹೊಸ ದಾಖಲೆ ಬರೆಯೋಣ ಎಂದರು.