ಮೈಸೂರು: ನಾನೊಬ್ಬ ಲೇಖಕ, ನನಗೆ ಪದ್ಮಭೂಷಣ ಪ್ರಶಸ್ತಿ ಸಿಕ್ಕಿರುವುದು ನಿಜಕ್ಕೂ ಸಂತಸ ತಂದಿದೆ. ಆದರೆ ಈ ಪ್ರಶಸ್ತಿಗಿಂತಲೂ ಮೀರಿದ ಸಂತೋಷವೆಂದರೆ ನನ್ನ ಪುಸ್ತಕಗಳನ್ನು ಲಕ್ಷಾಂತರ ಬರಹಗಾರರು ಓದಿ ಪ್ರತಿದಿನವೂ ಏನಾದರೊಂದು ಸಂತೋಷದ ವಿಚಾರವನ್ನು ಹೇಳುತ್ತಲೇ ಇರುತ್ತಾರೆ ಎಂದು ಪದ್ಮಭೂಷಣ ಪುರಸ್ಕೃತ ಸಾಹಿತಿ ಎಸ್ ಎಲ್ ಭೈರಪ್ಪ ಅವರು ಹೇಳಿದ್ದಾರೆ.
ನಿನ್ನೆ(ಬುಧವಾರ) ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿರುವ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ನಿವಾಸಕ್ಕೆ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಭೇಟಿ ನೀಡಿ ಹಿರಿಯ ಕಾದಂಬರಿಕಾರರನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬರುವ 2029ರ ವರೆಗೆ ಪ್ರಧಾನಿ ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗಿ ಮುಂದುವರೆಯಲಿ. ಆನಂತರ ನಿವೃತ್ತಿ ಹೊಂದಲಿ ಎಂದು ಹೇಳಿದರು. 'ನಾನು 2019 ರಲ್ಲಿ ಒಂದು ಲೇಖನ ಬರೆದಿದ್ದೆ. ಅದರಲ್ಲಿ ಮೋದಿ ಸ್ಪಷ್ಟ ಬಹಮತದೊಂದಿಗೆ ಪ್ರಧಾನಿಯಾದರು. ಈಗ ಹೇಳುತ್ತಿದ್ದೇನೆ. 2029 ರವರೆಗೆ ನರೇಂದ್ರ ಮೋದಿ ಪ್ರಧಾನಿಯಾಗಿ ಮುಂದುವರೆಯಲಿ. ಏಕೆಂದರೆ ಅವರಂಥ ಸೇವಾ ಮನೋಭಾವ ಇರುವ ವ್ಯಕ್ತಿಯನ್ನ ನಾವು ಹಿಂದೆ ನೋಡಿಲ್ಲ. ಅಂತಹ ವ್ಯಕ್ತಿ ಇನ್ನು ಐದು ವರ್ಷಗಳ ಕಾಲ ಪ್ರಧಾನಿಯಾದರೆ ದೇಶಕ್ಕೆ ಒಳ್ಳೆಯದು' ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ನಾನು ಯಾವುದೇ ರಾಜಕೀಯ ಪಕ್ಷದಲ್ಲಿ ಇಲ್ಲ. ಯಾವ ರಾಜಕೀಯ ಪಕ್ಷವನ್ನು ಓಲೈಕೆ ಮಾಡಲು ಈ ಮಾತನ್ನು ಹೇಳುತ್ತಿಲ್ಲ. ದೇಶಕ್ಕೆ ಉತ್ತಮ ಆಡಳಿತವನ್ನು ಮೋದಿ ನೀಡುತ್ತಿದ್ದಾರೆ. ಹಾಗಾಗಿ ಅವರ ಸೇವೆ ಇನ್ನಷ್ಟು ಕಾಲ ಈ ದೇಶಕ್ಕೆ ಬೇಕಾಗಿದೆ. ಆ ದೃಷ್ಠಿಯಿಂದ ಈ ಮಾತನ್ನ ಹೇಳುತ್ತಿದ್ದೇನೆ ಎಂದು ಸಾಹಿತಿ ಎಸ್ ಎಲ್ ಭೈರಪ್ಪ ಹೇಳಿಕೆ ನೀಡಿದರು.