ಮೈಸೂರು:ನಗರದ ಆರ್ಬಿಐ ಹಿಂಭಾಗದ ಶ್ಯಾದನಹಳ್ಳಿ ಗ್ರಾಮದ ಹೊರವಲಯದಲ್ಲಿ ಮೂರು ವರ್ಷದ ಗಂಡು ಚಿರತೆ ಸೆರೆಯಾಗಿದೆ. ಶ್ಯಾದನಹಳ್ಳಿ ಹೊರವಲಯದಲ್ಲಿ ಆಗಾಗ ಚಿರತೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಅರಣ್ಯ ಇಲಾಖೆಯ ಅಧಿಕಾರಿಗಳು ಜಮೀನಿನಲ್ಲಿ ಬೋನ್ ಇಟ್ಟಿದ್ದರು. ಆಹಾರ ಅರಸಿ ಬಂದ ಚಿರತೆಯು ಭಾನುವಾರ ರಾತ್ರಿ ಬೋನಿಗೆ ಬಿದ್ದಿದ್ದು, ವಿಷಯ ತಿಳಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯ ಆರ್ಎಫ್ಒ ಕೆ.ಸುರೇಂದ್ರ ಮತ್ತು ಸಿಬ್ಬಂದಿ ಸೆರೆಯಾಗಿರುವ ಚಿರತೆಯನ್ನು ಕಾಡಿಗೆ ಬಿಡಲು ನಿರ್ಧರಿಸಿದ್ದಾರೆ.
ಮೂರು ದಿನದ ಹಿಂದೆ ರಸ್ತೆಯಲ್ಲಿ ಓಡಾಡುತ್ತಿದ್ದ ಚಿರತೆ: ಚಿರತೆಯೊಂದು ಮೂರು ದಿನಗಳ ಹಿಂದೆ ಮೈಸೂರು ನಗರ ಪ್ರದೇಶದಲ್ಲಿ ರಸ್ತೆ ದಾಟಿದ ವಿಡಿಯೋ ನೋಡಿ ಜನರು ಭಯಭೀತರಾಗಿದ್ದಾರೆ. ಮೈಸೂರಿನ ಆರ್.ಟಿ.ನಗರದ ಉರುಕಾತೇಶ್ವರಿ ದೇವಸ್ಥಾನ ಬಳಿ ಚಿರತೆ ಪ್ರತ್ಯಕ್ಷವಾಗಿದ್ದು, ರಾತ್ರಿ ವೇಳೆ ರಸ್ತೆ ಬದಿ ಮಣ್ಣಿನ ಗುಡ್ಡದ ಹಿಂಭಾಗ ಅವಿತಿದ್ದ ಚಿರತೆ ರಸ್ತೆ ದಾಟಿದೆ. ಈ ದೃಶ್ಯ ರಸ್ತೆಯಲ್ಲಿ ಹೋಗುತ್ತಿದ್ದ ಪ್ರಯಾಣಿಕರೊಬ್ಬರ ಮೊಬೈಲ್ನಲ್ಲಿ ಸೆರೆಯಾಗಿದೆ. ಈ ವಿಡಿಯೋ ನೋಡಿರುವ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.
ತಿ.ನರಸೀಪುರದಲ್ಲಿ ನಿಲ್ಲದ ಚಿರತೆ ಹಾವಳಿ:ತಿ.ನರಸೀಪುರದಲ್ಲಿಮೂರು ತಿಂಗಳಿನಲ್ಲಿ ನಾಲ್ವರನ್ನು ಬಲಿ ಪಡೆದಿರುವ ಚಿರತೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅರಣ್ಯ ಇಲಾಖೆಯು ಕಾರ್ಯಾಚರಣೆ ನಡೆಸುತ್ತಿದ್ದರೂ ಸಹ ಅಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸುತ್ತಿವೆ.
ಇದನ್ನೂ ಓದಿ:ಕನ್ನಾಳ ಗುಡ್ಡದಲ್ಲಿ ಅರಣ್ಯ ಇಲಾಖೆ ಬೋನಿಗೆ ಬಿದ್ದ ಹೆಣ್ಣು ಚಿರತೆ: ಗ್ರಾಮಸ್ಥರು ನಿರಾಳ