ಮೈಸೂರು:ಒಂದು ತಿಂಗಳಿನಿಂದ ಗ್ರಾಮದ ಜಮೀನುಗಳಿಗೆ ನುಗ್ಗಿ ಜಾನುವಾರುಗಳನ್ನು ಭಕ್ಷಿಸಿ ಗ್ರಾಮಸ್ಥರಲ್ಲಿ ಆತಂಕವನ್ನು ಹೆಚ್ಚಿಸಿದ್ದ ಚಿರತೆ ಇದೀಗ ಬೋನಿಗೆ ಬಿದ್ದಿದೆ.
ಸರಗೂರು ತಾಲೂಕಿನ ಹಲಸೂರು ಗ್ರಾಮದ ಹೆಚ್.ಎಲ್ ಶಂಭುಲಿಂಗನಾಯ್ಕ್ ರವರ ಜಮೀನಿನಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆ ಸೆರೆಯಾಗಿದೆ.
ಕಳೆದು ಒಂದು ತಿಂಗಳಿನಿಂದ ಗ್ರಾಮದ ಜಮೀನುಗಳಲ್ಲಿ ಕಾಣಿಸಿಕೊಂಡಿದ್ದ ಚಿರತೆ ಜಮೀನುಗಳಲ್ಲಿ ಇರುತ್ತಿದ್ದ ಜಾನುವಾರುಗಳನ್ನು ತಿಂದು ಕಣ್ಮರೆಯಾಗುತ್ತಿತ್ತು. ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದ್ದರು. ಅರಣ್ಯಾಧಿಕಾರಿಗಳು ಒಂದು ತಿಂಗಳಿನಿಂದ ಬೋನು ಇಟ್ಟಿದ್ದರೂ ಸೆರೆಯಾಗದೇ ತಪ್ಪಿಸಿಕೊಳ್ಳುತ್ತಿದ್ದ ಚಿರತೆ ಇಂದು ಬೆಳಗ್ಗೆ ನಾಯಿ ಹಿಡಿಯಲು ಹೋಗಿ ಸೆರೆಯಾಗಿದೆ.
ಸೆರೆ ಸಿಕ್ಕಿ ಚಿರತೆಯನ್ನು ಬಂಡೀಪುರ ಅರಣ್ಯ ವ್ಯಾಪ್ತಿಯ ಕಲ್ಕೆರೆ ಅರಣ್ಯಕ್ಕೆ ಬಿಡಲು ಅರಣ್ಯಾಧಿಕಾರಿಗಳು ನಿರ್ಧರಿಸಿದ್ದಾರೆ. ಸರಗೂರು ತಾಲೂಕಿನ ವ್ಯಾಪ್ತಿಯಲ್ಲಿಯೇ ಒಂದು ತಿಂಗಳಲ್ಲಿ ಒಟ್ಟು ನಾಲ್ಕು ಚಿರತೆಗಳು ಸೆರೆಯಾಗಿವೆ.