ಮೈಸೂರು: ಉರುಳಿಗೆ ಸಿಲುಕಿ ಮೂರು ವರ್ಷದ ಹೆಣ್ಣು ಚಿರತೆ ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲೂಕಿನ ಕಗ್ಗಲಿ ಹುಂಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಚಂದ್ರಶೇಖರ್ ಎಂಬುವವರ ಜಮೀನಿನಲ್ಲಿ ಘಟನೆ ನಡೆದಿದೆ. ಜಮೀನಿನ ಸುತ್ತಲೂ ತಂತಿ ಬೇಲಿ ಅಳವಡಿಸಲಾಗಿದ್ದು, ಬ್ರೇಕ್ ವೈರ್ನಲ್ಲಿ ಉರುಳು ತಯಾರಿಸಿ ಕಟ್ಟಲಾಗಿತ್ತು. ಕಬ್ಬಿನ ಗದ್ದೆಯನ್ನು ಚಿರತೆ ಪ್ರವೇಶಿಸುವಾಗ ಉರುಳಿಗೆ ಸಿಲುಕಿದೆ. ಬಳಿಕ ಬಿಡಿಸಿಕೊಳ್ಳಲಾಗದೇ ಸುಮಾರು ಒಂದು ಗಂಟೆಗಳ ಕಾಲ ನರಳಾಡಿ ಚಿರತೆ ಸಾವನ್ನಪ್ಪಿದೆ.
ಚಿರತೆ ನರಳಾಟದ ವಿಡಿಯೋವನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆಹಿಡಿದಿದ್ದು, ಈ ವಿಡಿಯೋ ಚಿತ್ರೀಕರಿಸಿದ ವ್ಯಕ್ತಿ, "ಅರಣ್ಯ ಇಲಾಖೆ ಅಧಿಕಾರಿಗಳಿಗೆ ಚಿರತೆ ಸಿಲುಕಿರುವ ಬಗ್ಗೆ ತಿಳಿಸಲಾಗಿದೆ. ಬೆಳಗ್ಗೆ 8 ಗಂಟೆಗೆ ಈ ಬಗ್ಗೆ ಇಲಾಖೆಗೆ ತಿಳಿಸಿದ್ದು ಈವರೆಗೂ ಯಾರt ಸ್ಥಳಕ್ಕಾಗಮಿಸಿಲ್ಲ" ಎಂದು ಮಾತನಾಡಿದ್ದಾರೆ. ಅಲ್ಲದೇ ಚಿರತೆಯ ನರಳಾಟದ ದೃಶ್ಯವನ್ನು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
ಚಿರತೆ ಸಾವಿನ ಬಳಿಕ ಸ್ಥಳಕ್ಕೆ ನಂಜನಗೂಡು ವಲಯ ಅರಣ್ಯ ಅಧಿಕಾರಿ ಕಿರಣ್ ಕುಮಾರ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. "ಜಮೀನಿನಲ್ಲಿ ಉರುಳು ಹಾಕಿದ ರೈತನ ವಿರುದ್ಧ ಪ್ರಕರಣ ದಾಖಲು ಮಾಡಿದ್ದೇವೆ. ಚಿರತೆ ಸೆರೆಗೆ ಬೋನು ಅಳವಡಿಸಿದ್ದೇವೆ" ಎಂದು ಕಿರಣ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ:ಉರುಳಿಗೆ ಸಿಲುಕಿ ಚಿರತೆ ಸಾವು: ಪ್ರಕರಣ ದಾಖಲು