ಮೈಸೂರು:ಒಬ್ಬ ವಿಪಕ್ಷ ನಾಯಕನಿಲ್ಲದೆ ಬಜೆಟ್ ಮಂಡನೆಯಾಗಿರುವುದು ನಾಚಿಕೆಯ ಸಂಗತಿ. ಇದು ಬಿಜೆಪಿಯಲ್ಲಿ ಅರಾಜಕತೆ ಇದೆ ಎಂಬುದನ್ನು ತೋರಿಸುತ್ತದೆ ಎಂದು ಕಾಂಗ್ರೆಸ್ ಗ್ಯಾರಂಟಿಗಳನ್ನು ಟೀಕೆ ಮಾಡುವ ಬಿಜೆಪಿ ನಾಯಕರಿಗೆ, ಸ್ವತಃ ಬಿಜೆಪಿಯಿಂದ ನಾಮ ನಿರ್ದೇಶನಗೊಂಡ ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಅವರು ಬಿಜೆಪಿ ವಿರುದ್ಧ ವ್ಯಂಗ್ಯ ರೀತಿಯಲ್ಲಿ ಟೀಕೆ ಮಾಡಿದರು.
ಇಂದು ಮೈಸೂರು ಪತ್ರಕರ್ತರ ಭವನದಲ್ಲಿ ಇಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಅವರು, ರಾಜ್ಯದ ರಾಜಕೀಯ ಇತಿಹಾಸದಲ್ಲಿ ಒಬ್ಬ ವಿರೋಧ ಪಕ್ಷದ ನಾಯಕನಿಲ್ಲದೆ ಬಜೆಟ್ ಮಂಡನೆಯಾಗಿದೆ ಎಂದರೆ ಇದು ನಾಚಿಕೆಯ ಸಂಗತಿ. ಇದು ಬಿಜೆಪಿಯಲ್ಲಿ ಅರಾಜಕತೆ ಇದೇ ಎಂಬುದನ್ನು ತೋರಿಸುತ್ತದೆ. ಕಾಂಗ್ರೆಸ್ ಗ್ಯಾರಂಟಿಗಳನ್ನು ಟೀಕೆ ಮಾಡುವ ಬಿಜೆಪಿಗೆ ಈ ರೀತಿ ಆಗಿರುವುದು ನಾಚಿಕೆಗೇಡು. ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕ ಎಂದರೆ ಕುಮಾರಸ್ವಾಮಿ, ಅವರು ವಿರೋಧ ಪಕ್ಷದ ನಾಯಕರಾಗಿದ್ದಾರೆ ಎಂದು ಟೀಕಿಸಿದರು.
ಒಳ್ಳೆಯ ಬಜೆಟ್ ನೀಡಿದ್ದಾರೆ :ಮುಖ್ಯಮಂತ್ರಿ ಸಿದ್ದರಾಮಯ್ಯನವರು 2023-24 ನೇ ಸಾಲಿನ ಬಜೆಟ್ ಉತ್ತಮವಾಗಿದ್ದು. ಅಕ್ಷರ, ಅನ್ನ, ಆರೋಗ್ಯಕ್ಕೆ ಒತ್ತು ನೀಡಿದ್ದು, ಮೂರು ಕ್ಷೇತ್ರಕ್ಕೂ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಎಲ್ಲಾ ವರ್ಗದ ಜನತೆಗೆ ಉತ್ತಮ ಬಜೆಟ್ ನೀಡಿದ್ದಾರೆ. ಶಿಕ್ಷಣಕ್ಕೆ, ಸಮಾಜ ಕಲ್ಯಾಣಕ್ಕೆ, ಕನ್ನಡ ಪುಸ್ತಕ ಖರೀದಿಗೆ ಹೆಚ್ಚಿನ ಹಣ ನೀಡಿದ್ದರು. ಪ್ರಮುಖವಾಗಿ ಐದು ಗ್ಯಾರಂಟಿಗಳನ್ನು ದೇಶದಲ್ಲಿ ಎಲ್ಲೂ ನೀಡಿರಲಿಲ್ಲ. ಯಾವ ಜಾತಿ, ಧರ್ಮ ನೋಡದೇ ಎಲ್ಲರಿಗೂ ಗ್ಯಾರಂಟಿ ಯೋಜನೆ ನೀಡಿರುವುದು ದೇಶದಲ್ಲೇ ಮಾದರಿ ಎಂದು ಸಿದ್ದರಾಮಯ್ಯ ಬಜೆಟ್ ಬಗ್ಗೆ ಮೆಚ್ಚುಗೆ ನೀಡಿದರು. ಹಾಗೂ ಗ್ಯಾರಂಟಿ ಯೋಜನೆಗಳನ್ನು ಸವಾಲುಗಳ ನಡುವೆಯೂ ಜಾರಿಗೆ ತರಲು ಹೊರಟಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಏಕರೂಪ ನಾಗರಿಕ ಸಂಹಿತೆ ಜಾರಿ ಬಗ್ಗೆ ಪ್ರತಿಕ್ರಿಯೆ :ಇದು ಬಹಳ ದೊಡ್ಡ ವಿಷಯ, ಅದನ್ನು ಮಾಡಬೇಕೆಂದು ಬಹಳ ವರ್ಷಗಳಿಂದ ಪ್ರಯತ್ನ ಮಾಡುತ್ತಿದ್ದಾರೆ. ವೈವಿಧ್ಯತೆಯಲ್ಲಿ ಏಕತೆ, ಏಕತೆಯಲ್ಲಿ ವೈವಿಧ್ಯತೆ. ಇದನ್ನು ಎಲ್ಲಾ ರಾಜ್ಯಗಳು ಒಪ್ಪಬೇಕು. ಮುಂದಿನ ಲೋಕಸಭಾ ಚುನಾವಣೆಗೆ ವೋಟ್ ಬ್ಯಾಂಕ್ಗಾಗಿ ಇದನ್ನು ಇಟ್ಟಿದ್ದಾರೆ ಅಷ್ಟೇ, ಇದು ಜಾರಿಯಾಗುವುದು ಕಷ್ಟ ಎಂದು ಪರಿಷತ್ ಸದಸ್ಯ ವಿಶ್ವನಾಥ್ ಅಭಿಪ್ರಾಯಪಟ್ಟರು.