ಮೈಸೂರು :ಜೆಡಿಎಸ್ ಹಿತ ಶತ್ರುಗಳಿಂದ ತಮಗೆ ಲಾಭ ಆಗುತ್ತೆ ಎಂದು ಕಾಂಗ್ರೆಸ್ ಅಂದುಕೊಂಡಿದೆ. ಅದ್ಯಾವುದೂ ಈಗ ನಡೆಯುವುದಿಲ್ಲ. ಪಕ್ಷದಲ್ಲಿರುವ ಹಿತಶತ್ರುಗಳು ಈಗ ನೇರ ಶತ್ರುಗಳಾಗಿದ್ದಾರೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಪರಿಷತ್ ಚುನಾವಣೆ ವಿಚಾರವಾಗಿ ಮಾತನಾಡಿದ ಅವರು, ಅವರ ಬಗ್ಗೆ ನಮ್ಮ ಕಾರ್ಯಕರ್ತರಿಗೆ ಅರಿವಾಗಿದೆ.
ಮಂಡ್ಯಕ್ಕೆ ಕುಮಾರಸ್ವಾಮಿ ಕೊಡುಗೆ ಏನು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕೇಳಿದ್ದಾರೆ. ಮೊದಲು ತಮ್ಮ ಕೊಡುಗೆ ಏನು ಎಂದು ಸಿದ್ದರಾಮಯ್ಯ ಹೇಳಲಿ. ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ನಿಮ್ಮ ಕೊಡುಗೆ. 200 ಕುಟುಂಬಗಳನ್ನು ಅನಾಥ ಮಾಡಿದ್ದು ನಿಮ್ಮ ಕೊಡುಗೆ. ನಮ್ಮ ಕೊಡುಗೆ ಏನು ಎಂಬುದು ಮಂಡ್ಯ ಜನರಿಗೆ ಗೊತ್ತಿದೆ. ನಾನು ಮಂಡ್ಯವನ್ನು ಇನ್ನಷ್ಟು ಅಭಿವೃದ್ಧಿ ಮಾಡುವಷ್ಟರಲ್ಲಿ ನೀವು ಸರ್ಕಾರ ತೆಗೆದಿರಿ ಎಂದು ಆರೋಪಿಸಿದರು.
ಬಿಎಸ್‌ವೈ ಪುತ್ರನಿಗೆ ಮೇಲ್ಮನೆ ಟಿಕೆಟ್ ತಪ್ಪಿದ ವಿಚಾರವಾಗಿ ಮಾತನಾಡಿ, ಯಾವುದೇ ತತ್ವದ ಕಥೆ ಹೇಳಿ ಟಿಕೆಟ್ ಕೊಟ್ಟಿಲ್ಲ. ಇದು ಬಿಜೆಪಿಗೆ ತಿರುಗುಬಾಣವಾಗುವ ಲಕ್ಷಣಗಳು ಕಾಣುತ್ತಿದೆ. ಇದರಿಂದ ಬೇರೆ ಪಕ್ಷಕ್ಕೆ ಲಾಭ ನಷ್ಟದ ಪ್ರಶ್ನೆ ಇಲ್ಲ. ಆದರೆ, ಸರ್ಕಾರದ ಮೇಲೆ ಇದು ಗಂಭೀರ ಪರಿಣಾಮ ಬೀರಬಹುದು. ಆಡಳಿತದ ಮೇಲು ಕೆಟ್ಟ ಪರಿಣಾಮ ಬೀರುವ ಲಕ್ಷಣ ಕಾಣುತ್ತಿದೆ. ಗುಂಪುಗಾರಿಕೆಗೆ ಇನ್ನು ಹೆಚ್ಚು ಅವಕಾಶವಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಂಗಳೂರಿನಲ್ಲಿ ನಡೆಯುತ್ತಿರುವ ಅಷ್ಟಮಂಗಲ ಪ್ರಶ್ನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅಷ್ಟಮಂಗಲ ಪ್ರಶ್ನೆಗಿಂತ ಎಲ್ಲಾ ತೀರ್ಮಾನ ಆಗೋದು ಕೇಶವಕೃಪಾದಲ್ಲಿ. ಅಲ್ಲಿಂದ ಬರುವ ಸಂದೇಶಗಳನ್ನು ಇವರು ಪಾಲಿಸುತ್ತಾರೆ. ಈ ರೀತಿಯ ವಾತಾವರಣದಿಂದ ದೇಶಕ್ಕೆ ಮುಂದೆ ಉತ್ತಮ ಭವಿಷ್ಯ ಇಲ್ಲ. ಇನ್ನೂ ಒಂದು ವರ್ಷ ಈ ತರದ ಬರವಣಿಗೆಗಳು ನಡೆಯುತ್ತಿರುತ್ತವೆ. ದೇಶದ ಶಾಂತಿ, ಸಾಮರಸ್ಯವನ್ನು ಕದಡುವುದರಿಂದ ಮತ್ತಷ್ಟು ಆತಂಕ ಎದುರಾಗಿದೆ ಎಂದು ಹೇಳಿದರು.
ಶ್ರೀರಂಗಪಟ್ಟಣದ ಜಾಮೀಯಾ ಮಸೀದಿ ವಿಚಾರವಾಗಿ ಜೆಡಿಎಸ್ ನಿಲುವು ಬಗ್ಗೆ ಮಾತನಾಡಿ,ಅದರ ಬಗ್ಗೆ ಆತುರ ಮಾಡೋದು ಏನಿದೆ. ದೇವರು ಕನಸ್ಸಿನಲ್ಲೇನಾದ್ರೂ ಬಂದು ನನ್ನ ಮೂಲ ಸ್ಥಾನ ಇಲ್ಲಿದೆ ಎಂದು ಹೇಳಿದ್ನಾ?. ಅದನ್ನು ಸರಿಪಡಿಸಿ ಎಂದು ಕೇಳಿದ್ನಾ?. ಇದನ್ನು ನೋಡಿದ್ರೆ ಮತ್ತೊಂದು ವಿವಾದ ಶುರು ಆಗೋ ಲಕ್ಷಣ ಇದೆ. ಟಿಪ್ಪು ಕಾಲದಲ್ಲಿ ಹಲವು ಹಿಂದೂ ದೇವಾಲಯಗಳಿಗೆ ಭೂಮಿ ದಾನ ಮಾಡಿದ್ದ.
ಇದು ಆ ಸಮಾಜಕ್ಕೆ ಕನಸ್ಸಿಗೆ ಬರುತ್ತೆ. ಆವಾಗ ಆ ಸಮಾಜಕ್ಕೆ ಭೂಮಿ ಬಿಟ್ಟುಕೊಡ್ತಿರಾ.?ಹಲವು ದೇವಾಲಯಗಳಿಗೆ ಟಿಪ್ಪು ಭೂಮಿ ನೀಡಿರೋ ಉದಾಹರಣೆ ಇದೆ. ಅವರೂ ಕೂಡ ಬಂದು ಕೇಳಿದ್ರೆ ನೀವು ಕೊಡ್ತಿರಾ ಎಂದು ಪ್ರಶ್ನಿಸಿದರು. ಇವೆಲ್ಲವನ್ನು ಬಿಟ್ಟು ಜನರ ಬದುಕನ್ನು ನೋಡಿ,ಈಗ ತಾನೆ ಕೋವಿಡ್ ಸಂಕಷ್ಟದಿಂದ ಹೊರ ಬಂದಿದ್ದೇವೆ. ಈ ಸಂದರ್ಭದಲ್ಲಿ ಜನರ ಬದುಕನ್ನು ಕಟ್ಟಿ, ಹಾಳು ಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಓದಿ :ಪರಿಷ್ಕರಣೆಗೆ ತೀವ್ರ ಪ್ರತಿರೋಧ.. ಮಕ್ಕಳಿಗೆ ಇನ್ನೂ ಸಿಗದ ಪಠ್ಯ.. ದೇವನೂರು ಬಳಿಕ ಡಾ. ಜಿ ರಾಮಕೃಷ್ಣ ತಮ್ಮ ಪಾಠ ಕೈಬಿಡಲು ಪತ್ರ..