ಮೈಸೂರು : ಗೋಹತ್ಯೆ ನಿಷೇಧ ಕಾಯಿದೆ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಿ, ನಾಡಿನ ಜನರ ಮನಸ್ಸಿಗೆ ನೋವಾಗದ ರೀತಿಯಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಬಗ್ಗೆ ಬಿಜೆಪಿಯವರು ಸುಮ್ಮಸುಮ್ಮನೆ ತಿರುಗಿ ಬೀಳುತ್ತಿದ್ದಾರೆ. ಅವರಿಗೆ ಅವಸರ ಏಕೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.
ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಹಮ್ಮಿಕೊಂಡಿದ್ದ ದೇವರಾಜ ಅರಸು ಜನ್ಮದಿನದ ಆಚರಣೆ ಸಂದರ್ಭದಲ್ಲಿ ಭಾಗವಹಿಸಿದ ವಿಶ್ವನಾಥ್ ಮಾಧ್ಯಮಗಳ ಜೊತೆ ಮಾತನಾಡಿ, ದೇವರಾಜ ಅರಸು ಅವರು ಜನಸಾಮಾನ್ಯರ ಅರಸರಾಗಿದ್ದರು. ಸುಮಾರು 21 ಲಕ್ಷ ಎಕರೆ ಭೂಮಿಯನ್ನು ನೈಸರ್ಗಿಕ ನ್ಯಾಯದ ಮೂಲಕ ಉಳುವವರಿಗೆ ನೀಡಿದರು. ಹಿಂದುಳಿದ ವರ್ಗಗಳ ಅಭಿವೃದ್ಧಿ, ಕರ್ನಾಟಕ ನಾಮಕರಣ, ಸಾಲದಿಂದ ವಿಮೋಚನೆ ಸೇರಿದಂತೆ ಹಲವಾರು ಅಭಿವೃದ್ಧಿ ಕೆಲಸ, ಕಾರ್ಯಕ್ರಮಗಳನ್ನು ರಾಜಪ್ರಭುತ್ವದದಲ್ಲಿದ್ದ ಪ್ರಜಾಪ್ರಭುತ್ವದಲ್ಲಿ ಮುಂದುವರೆಸಿಕೊಂಡು ಹೋಗಿದ್ದರು. ಇಂದಿರಾ ಗಾಂಧಿ, ದೇವರಾಜ ಅರಸು ಅವರ ನಂತರ ಈಗಿನ ಸಿದ್ದರಾಮಯ್ಯ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡಬೇಕಾಗಿದೆ ಎಂದರು.
ರಾಜ್ಯದಲ್ಲಿ ಭಾರಿ ಸುದ್ದಿಯಾಗುತ್ತಿರುವಗೋಹತ್ಯೆ ನಿಷೇಧ ಕಾಯ್ದೆ ವಿಚಾರದ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎಚ್.ವಿಶ್ವನಾಥ್, ಗೋಹತ್ಯೆ ನಿಷೇಧ ಕಾಯಿದೆಯ ಬಗ್ಗೆ ಪಶುಸಂಗೋಪನೆ ಸಚಿವ ವೆಂಕಟೇಶ್ ಅವರ ಹೇಳಿಕೆಯ ನಂತರ ಬಿಜೆಪಿಯವರು ಸುಮ್ಮನೆ ತಿರುಗಿ ಬೀಳುತ್ತಿದ್ದಾರೆ. ಈಗಾಗಲೇ ಸಿದ್ದರಾಮಯ್ಯ ಈ ವಿಚಾರವನ್ನು ಕ್ಯಾಬಿನೆಟ್‌ನಲ್ಲಿ ತಂದು ಚರ್ಚೆ ಮಾಡಿ, ಆ ನಂತರ ಜನರ ಮನಸ್ಸಿಗೆ ನೋವಾಗದ ರೀತಿಯಲ್ಲಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದರಲ್ಲಿ ರಾಜ್ಯ ಸರ್ಕಾರ ತೆಗೆದುಕೊಳ್ಳುವ ಅಭಿಪ್ರಾಯವೇ ನನ್ನ ಅಭಿಪ್ರಾಯ ಎಂದು ತಿಳಿಸಿದರು.